ಕುಸ್ತಿಪಟುಗಳೊಂದಿಗೆ ತಮ್ಮ ಜಿಯು-ಜಿಟ್ಸು ಕೌಶಲ್ಯ ಪ್ರದರ್ಶಿಸಿದ ರಾಹುಲ್
ಹೊಸದಿಲ್ಲಿ: ಹರ್ಯಾಣಾದ ಝಜ್ಜರ್ ಜಿಲ್ಲೆಯ ವೀರೇಂದ್ರ ಅಖಾರಗೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಸಂದರ್ಭ ಕುಸ್ತಿಪಟು ಬಜರಂಗ್ ಪುಣಿಯಾ ಜೊತೆಗೆ ತಮ್ಮ ಜಿಯು ಜಿಟ್ಸು ಕೌಶಲ್ಯಗಳನ್ನು ಪ್ರದರ್ಶಿಸಿದರು. ಭಾರತದ ಕುಸ್ತಿ ಫೆಡರೇಷನ್ ಚುನಾವಣೆಯಲ್ಲಿ ಹಿಂದಿನ ಅಧ್ಯಕ್ಷ, ಲೈಂಗಿಕ ಕಿರುಕಳ ಆರೋಪ ಹೊತ್ತ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಹಾಗೂ ನಂತರ ಭಾರತದ ಒಲಿಂಪಿಕ್ ಸಮಿತಿಯು ಫೆಡರೇಶನ್ ಆಡಳಿತವನ್ನು ವಜಾಗೊಳಿಸಿ ತಾತ್ಕಾಲಿಕ ಸಮಿತಿ ನೇಮಕಗೊಳಿಸಿರುವ ಹಿನ್ನೆಲೆಯಲ್ಲಿ ರಾಹುಲ್ ಅವರ ಭೇಟಿ ಕುತೂಹಲ ಕೆರಳಿಸಿದೆ.
ಅಖಾರಾದಲ್ಲಿ ಕುಸ್ತಿಪಟುಗಳೊಂದಿಗೆ ರಾಹುಲ್ ಅವರು ಪ್ರಾಕ್ಟೀಸ್ ಸೆಷನ್‌ನಲ್ಲಿ ಭಾಗವಹಿಸಿ ಈ ವೇಳೆ ತಮ್ಮ ಜಪಾನಿ ಮಾರ್ಷಲ್ ಕಲೆಗಳ ಕೌಶಲ್ಯಗಳನ್ನು ತಮ್ಮ ಬುಧವಾರದ ಭೇಟಿ ವೇಳೆ ಪ್ರದರ್ಶಿಸಿದರು.
ರಾಹುಲ್ ಅವರು ಬಜರಂಗ್ ಪುನಿಯಾ ಸಹಿತ ಇತರ ಕುಸ್ತಿಪಟುಗಳಿಂದ ಕುಸ್ತಿಯ “ಧೋಬಿ ಪಚಾಡ್” “ಧಕ್” ಮುಂತಾದವುಗಳ ಬಗ್ಗೆ ತಿಳಿದುಕೊಂಡಿರು.
ಬಜರಂಗ್ ಪುನಿಯಾ ರಾಹುಲ್ ಭೇಟಿಯ ವೀಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಅವರನ್ನು ತಮ್ಮ ಜಿಯು-ಜಿಟ್ಸು ಮಾರ್ಷಲ್ ಕಲೆಯ ಲಾಕ್ಸ್ ಮತ್ತು ಚೋಕ್ಸ್ ತಂತ್ರಗಾರಿಕೆ ಮೂಲಕ ಮಣಿಸಿರುವುದು ಅದರಲ್ಲಿ ಕಾಣಿಸುತ್ತದೆ.
ಜಿಯು ಜಿಟ್ಸು ಒಂದು ಜಪಾನಿ ಮಾರ್ಷಲ್ ಕಲೆಯಾಗಿದೆ. ರಾಹುಲ್ ಅವರು ಆಧುನಿಕ ಜಪಾನಿ ಮಾರ್ಷಲ್ ಕಲೆ ಐಕಿಡೋದಲ್ಲೂ ತರಬೇತಿ ಪಡೆದಿದ್ದಾರೆ. ರಾಹುಲ್ ಅವರ ಐಕಿಡೊ ಕೋಚ್ ಸೆನ್ಸೈ ಪರಿಟೋಸ್ ಕರ್ ಪ್ರಕಾರ 2013ರಲ್ಲಿ ಪರೀಕ್ಷೆಗೆ ಹಾಜರಾಗಿ ತೇರ್ಗಡೆಗೊಂಡು ರಾಹುಲ್ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾರೆ.
ರಾಹುಲ್ ಅವರು ಕುಸ್ತಿಪಟುಗಳೊಂದಿಗೆ ಉಪಾಹಾರ ಕೂಡ ಸೇವಿಸಿದ್ದಾರೆ.ಅವರಿಗೆ ಸ್ಥಳೀಯವಾಗಿ ಬೆಳೆಸಲಾದ ತರಕಾರಿಗಳನ್ನೂ ನೀಡಲಾಯಿತು.
ರಾಹುಲ್ ಅವರ ಭೇಟಿ ಕುರಿತು ಟ್ವೀಟ್ ಮಾಡಿ ಬಜರಂಗ್ ಪುಣಿಯಾ ಟ್ವೀಟ್ ಮಾಡಿ ಖುಷಿ ವ್ಯಕ್ತಪಡಿಸಿದ್ದಾರೆ.