ರಾಹುಲ್ ಗಾಂಧಿ ನಾಲಿಗೆ ಕತ್ತರಿಸಿದವರಿಗೆ ರೂ. 11 ಲಕ್ಷ ಬಹುಮಾನ ಘೋಷಿಸಿದ ಶಿಂದೆ ಬಣದ ಶಾಸಕ
ಮುಂಬೈ: ಅಮೆರಿಕಾದಲ್ಲಿ ಮೀಸಲಾತಿ ಕುರಿತು ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಅವರ ನಾಲಿಗೆಯನ್ನು ಕತ್ತರಿಸುವವರಿಗೆ ರೂ. 11 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸುವ ಮೂಲಕ ಶಿವಸೇನೆ (ಶಿಂದೆ ಬಣ) ಶಾಸಕ ಸಂಜಯ್ ಗಾಯಕ್ವಾಡ್ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.
ರಾಹುಲ್ ಗಾಂಧಿಗೆ ಹಿಂದುಳಿದ, ಆದಿವಾಸಿ ಮತ್ತಿತರರ ಮೀಸಲಾತಿಯನ್ನು ಅಂತ್ಯಗೊಳಿಸುವುದು ಬೇಕಿದೆ. ಹೀಗಾಗಿಯೇ ಅವರು ಮೀಸಲಾತಿಯನ್ನು ಅಂತ್ಯಗೊಳಿಸುವ ಮಾತನಾಡಿದ್ದಾರೆ. ಮಹಾರಾಷ್ಟ್ರ ಮತ್ತು ದೇಶದೆಲ್ಲೆಡೆ ಮೀಸಲಾತಿ ಹೆಚ್ಚಳಕ್ಕೆ ಬೇಡಿಕೆ ಹೆಚ್ಚುತ್ತಿರುವ ಬೆನ್ನಿಗೇ ರಾಹುಲ್ ಗಾಂಧಿ ಮೀಸಲಾತಿಯನ್ನು ಅಂತ್ಯಗೊಳಿಸುವ ಹೇಳಿಕೆ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮತ ಪಡೆಯಲು ಅವರು ಸುಳ್ಳು ನಿರೂಪಣೆಗಳನ್ನು ಹರಡಿದ್ದರು. ಆದರಿಂದು, ದೇಶದಲ್ಲಿನ ಮೀಸಲಾತಿಯನ್ನು ಅಂತ್ಯಗೊಳಿಸುವ ಮಾತನಾಡುತ್ತಿದ್ದಾರೆ. ಆ ಮೂಲಕ ಕಾಂಗ್ರೆಸ್ ಪಕ್ಷದ ನೈಜ ಮುಖವನ್ನು ಬಯಲು ಮಾಡಿದ್ದಾರೆ. ಹೀಗಾಗಿ, ರಾಹುಲ್ ಗಾಂಧಿ ನಾಲಿಗೆಯನ್ನು ಕತ್ತರಿಸುವ ಯಾರಿಗೇ ಆದರೂ, ನಾನು ರೂ. 11 ಲಕ್ಷ ಬಹುಮಾನ ನೀಡುತ್ತೇನೆ ಎಂದು ಹೇಳಿದ್ದಾರೆ.
ಬುಲ್ಧಾನಾ ವಿಧಾನಸಭಾ ಕ್ಷೇತ್ರದ ಶಿವಸೇನೆ(ಶಿಂದೆ ಬಣ)ಯ ಶಾಸಕರಾಗಿರುವ ಗಾಯಕ್ವಾಡ್ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದು ಹೊಸದೇನಲ್ಲ. ಫೆಬ್ರವರಿ ತಿಂಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದ ಸಂಜಯ್ ಗಾಯಕ್ವಾಡ್, 1987ರಲ್ಲಿ ನಾನು ಹುಲಿಯೊಂದನ್ನು ಬೇಟೆಯಾಡಿದ್ದೆ ಹಾಗೂ ಹುಲಿಯ ಉಗುರನ್ನು ನನ್ನ ಕುತ್ತಿಗೆಯ ಸುತ್ತ ಧರಿಸಿದ್ದೇನೆ ಎಂದು ಹೇಳಿಕೊಂಡಿದ್ದರು. ಇದರ ಬೆನ್ನಿಗೇ, ಅವರ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಕಳೆದ ಮಾರ್ಚ್ ತಿಂಗಳಲ್ಲಿ ಪೊಲೀಸ್ ಲಾಠಿಯಿಂದ ಜನರ ಗುಂಪಿನ ಮೇಲೆ ಹಲ್ಲೆ ನಡೆಸಿ ಮತ್ತೊಮ್ಮೆ ವಿವಾದಕ್ಕೀಡಾಗಿದ್ದರು.