ರಾಜ್ಯ ಸ್ಥಾನಮಾನವನ್ನು ಬಿಜೆಪಿ ಕಸಿದುಕೊಂಡಿದೆ : ಜಮ್ಮು ಮತ್ತು ಕಾಶ್ಮೀರದಲ್ಲಿ ರಾಹುಲ್ ಗಾಂಧಿ ವಾಗ್ದಾಳಿ

Update: 2024-09-04 14:57 GMT

ರಾಹುಲ್ ಗಾಂಧಿ |  PC : PTI  

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಕಸಿದುಕೊಂಡಿರುವುದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿಯನ್ನು ಟೀಕಿಸಿದ್ದಾರೆ ಹಾಗೂ ರಾಜ್ಯ ಸ್ಥಾನಮಾನವನ್ನು ಮರಳಿಸುವ ತನ್ನ ಭರವಸೆಯನ್ನು ಪುನರುಚ್ಚರಿಸಿದ್ದಾರೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷ ನ್ಯಾಶನಲ್ ಕಾನ್ಫರೆನ್ಸ್ (ಎನ್‌ಸಿ) ರಾಜ್ಯದಲ್ಲಿ ಮುಂದಿನ ಸರಕಾರವನ್ನು ರಚಿಸುವ ಭರವಸೆಯನ್ನೂ ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.

‘‘ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದು ರಾಜ್ಯವನ್ನು ಕೇಂದ್ರಾಡಳಿತದ ದರ್ಜೆಗೆ ಇಳಿಸಲಾಗಿದೆ ಮತ್ತು ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಇದು ಹಿಂದೆಂದೂ ನಡೆದಿಲ್ಲ’’ ಎಂದು ಅವರು ನುಡಿದರು.

ಕೇಂದ್ರ ಸರಕಾರವು 2019ರಲ್ಲಿ, ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರದ ಅರೆ-ಸ್ವಾಯತ್ತ ಸ್ಥಾನಮಾನವನ್ನು ವಾಸಪ್ ಪಡೆದಿತ್ತು ಹಾಗೂ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು. 2014ರ ಬಳಿಕ, ರಾಜ್ಯದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆಯಲು ದಿನಾಂಕ ನಿಗದಿಯಾಗಿದೆ. ಚುನಾವಣೆಯು ಸೆಪ್ಟಂಬರ್ ಮತ್ತು ಅಕ್ಟೋಬರ್‌ನಲ್ಲಿ ಮೂರು ಹಂತಗಳಲ್ಲಿ ನಡೆಯಲಿದೆ.

‘‘ಮೊದಲಿಗೆ, ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಬೇಕಾಗಿದೆ. ಯಾಕೆಂದರೆ ಬಿಜೆಪಿಯು ನಿಮ್ಮ ರಾಜ್ಯ ಸ್ಥಾನಮಾನವನ್ನು ಕಸಿದುಕೊಂಡಿರುವುದಷ್ಟೇ ಅಲ್ಲ, ನಿಮ್ಮ ಹಕ್ಕುಗಳು, ಹಣ ಮತ್ತು ಎಲ್ಲವನ್ನೂ ಕಸಿದುಕೊಂಡಿದೆ’’ ಎಂದು ರಂಬನ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಹೇಳಿದರು.

ರಾಹುಲ್ ಗಾಂಧಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್‌ರನ್ನು ರಾಜನಿಗೆ ಹೋಲಿಸಿದರು. ‘‘ನಿಮ್ಮ ಸಂಪತ್ತನ್ನು ಹೊರಗಿನವರಿಗೆ ಕೊಡಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ ಮೊದಲ ಕೆಲಸ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸುವುದು. ಅದನ್ನು ಚುನಾವಣೆಗೆ ಮೊದಲೇ ಮರುಸ್ಥಾಪಿಸಬೇಕಾಗಿತ್ತು. ಆದರೆ, ಚುನಾವಣೆ ಮೊದಲು ನಡೆಯಬೇಕೆಂದು ಬಿಜೆಪಿ ಬಯಸಿದೆ’’ ಎಂದು ಅವರು ನುಡಿದರು.

‘‘ಪ್ರತಿಪಕ್ಷ ಮೈತ್ರಿಕೂಟವು ಬಿಜೆಪಿ ಮೇಲೆ ಎಷ್ಟೊಂದು ಒತ್ತಡವನ್ನು ಹೇರುತ್ತದೆ ಎಂದರೆ, ಅವರು ರಾಜ್ಯ ಸ್ಥಾನಮಾನವನ್ನು ಕೊಡಲೇಬೇಕು’’ ಎಂದು ಅವರು ಹೇಳಿದರು.

ನಿರುದ್ಯೋಗ ಸಮಸ್ಯೆಗೆ, ಅದರಲ್ಲೂ ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರದ ನಿರುದ್ಯೋಗ ಸಮಸ್ಯೆಗೆ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ರಾಹುಲ್ ಗಾಂಧಿ ದೂರಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News