ದಿಲ್ಲಿ ಕೋಚಿಂಗ್ ಸೆಂಟರ್ ಸಾವುಗಳು ವ್ಯವಸ್ಥೆಯ ಸಾಮೂಹಿಕ ವೈಫಲ್ಯ: ರಾಹುಲ್ ಗಾಂಧಿ

Update: 2024-07-28 10:23 GMT

ರಾಹುಲ್ ಗಾಂಧಿ | PC : PTI

ಹೊಸದಿಲ್ಲಿ: ಶುಕ್ರವಾರ ರಾತ್ರಿ ಭಾರೀ ಮಳೆಯಿಂದಾಗಿ ದಿಲ್ಲಿಯ ಹಳೆಯ ರಾಜಿಂದರ್ ನಗರ ಪ್ರದೇಶದಲ್ಲಿಯ ತರಬೇತಿ ಕೇಂದ್ರವೊಂದರ ನೆಲಮಾಳಿಗೆಗೆ ನೆರೆ ನೀರು ನುಗ್ಗಿದ ಪರಿಣಾಮ ಐಎಎಸ್ ಅಧಿಕಾರಿಗಳಾಗುವ ಕನಸು ಕಾಣುತ್ತಿದ್ದ ಮೂರು ಯುವಜೀವಗಳು ಉಸಿರು ಕಳೆದುಕೊಂಡಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಈ ಸಾವುಗಳನ್ನು ‘ವ್ಯವಸ್ಥೆಯ ಸಾಮೂಹಿಕ ವೈಫಲ್ಯ’ ಎಂದು ಬಣ್ಣಿಸಿದ್ದಾರೆ. ಪ್ರತಿಯೊಬ್ಬ ಪ್ರಜೆಯ ಸುರಕ್ಷತೆ ಸರಕಾರಗಳ ಹೊಣೆಗಾರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

‘ದಿಲ್ಲಿಯ ಕೋಚಿಂಗ್ ಸೆಂಟರ್‌ನ ನೆಲಮಾಳಿಗೆಯು ಜಲಾವೃತಗೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದ ಮೂವರು ವಿದ್ಯಾರ್ಥಿಗಳ ಸಾವು ಅತ್ಯಂತ ದುರದೃಷ್ಟಕರ. ಕೆಲವು ದಿನಗಳ ಹಿಂದೆ ಪಟೇಲ್ ನಗರದಲ್ಲಿ ಮಳೆಯ ಸಂದರ್ಭದಲ್ಲಿ ವಿದ್ಯುದಾಘಾತದಿಂದ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದ. ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು’ ಎಂದು ರಾಹುಲ್ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಈ ಮೂಲಸೌಕರ್ಯ ಕುಸಿತವು ವ್ಯವಸ್ಥೆಯ ಸಾಮೂಹಿಕ ವೈಫಲ್ಯವಾಗಿದೆ. ತನ್ನ ಜೀವವನ್ನು ಕಳೆದುಕೊಳ್ಳುವ ಮೂಲಕ ಸಾಮಾನ್ಯ ನಾಗರಿಕ ಪ್ರತಿ ಹಂತದಲ್ಲಿಯೂ ಅಸುರಕ್ಷಿತ ನಿರ್ಮಾಣ,ಕಳಪೆ ನಗರ ಯೋಜನೆ ಮತ್ತು ಸಂಸ್ಥೆಗಳ ಬೇಜವಾಬ್ದಾರಿಗೆ ಬೆಲೆ ತೆರುತ್ತಿದ್ದಾನೆ. ಸುರಕ್ಷತೆ ಮತ್ತು ಆರಾಮ ಜೀವನ ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಸರಕಾರಗಳ ಜವಾಬ್ದಾರಿ ಎಂದೂ ಅವರು ಹೇಳಿದ್ದಾರೆ.

ಶುಕ್ರವಾರ ರಾತ್ರಿ ಏಕಾಏಕಿ ರಾವ್ಸ್ ಐಎಎಸ್ ಸ್ಟಡಿ ಸೆಂಟರ್‌ನ ನೆಲಮಾಳಿಗೆಗೆ ನೆರೆ ನೀರು ನುಗ್ಗಿದ್ದು,10-12 ಅಡಿಗಳಷ್ಟು ಎತ್ತರ ನೀರು ನಿಂತಿದ್ದರಿಂದ ತೆಲಂಗಾಣದ ತಾನಿಯಾ ಸೋನಿ(25),ಉತ್ತರ ಪ್ರದೇಶದ ಶ್ರೇಯಾ ಯಾದವ (25) ಮತ್ತು ಕೇರಳದ ನೆವಿನ್ ಡಾಲ್ವಿನ್ (28) ಮೃತಪಟ್ಟಿದ್ದರು. ನೆಲಮಾಳಿಗೆಯಲ್ಲಿ ಗ್ರಂಥಾಲಯವಿದ್ದು,ಈ ಸಂದರ್ಭದಲ್ಲಿ ಅಲ್ಲಿ ಹಲವಾರು ವಿದ್ಯಾರ್ಥಿಗಳಿದ್ದರು.

ಕೋಚಿಂಗ್ ಸೆಂಟರ್‌ನ ಮಾಲಿಕ ಅಭಿಷೇಕ ಗುಪ್ತಾ ಮತ್ತು ಕೋಆರ್ಡಿನೇಟರ್ ದೇಶಪಾಲ್ ಸಿಂಗ್ ಅವರನ್ನು ಪೋಲಿಸರು ಬಂಧಿಸಿ,ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ದೂರದ ಊರುಗಳಿಂದ ಇಲ್ಲಿಗೆ ಬರುವ ಮಕ್ಕಳ ಜೀವಗಳನ್ನು ಕಿತ್ತುಕೊಳ್ಳುವುದು ನಿರ್ಲಕ್ಷ್ಯ ಮತ್ತು ದುರಾಡಳಿತದ ಪರಮಾವಧಿಯಾಗಿದೆ ಎಂದು ಅವರು ಟ್ವೀಟಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News