ಮಧ್ಯಪ್ರದೇಶ ಭಾರತದ ‘ಭ್ರಷ್ಟಾಚಾರದ ರಾಜಧಾನಿ’: ರಾಹುಲ್ ಗಾಂಧಿ
ಭೋಪಾಲ: ಮಧ್ಯಪ್ರದೇಶ ದೇಶದ ‘ಭ್ರಷ್ಟಾಚಾರದ ರಾಜಧಾನಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಹೇಳಿದ್ದಾರೆ. ಅಲ್ಲದೆ, ಇಲ್ಲಿನ ಬಿಜೆಪಿ ಸರಕಾರ ಅತಿ ಹೆಚ್ಚು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ ಎಂದು ಕೂಡ ಆರೋಪಿಸಿದ್ದಾರೆ.
ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಪುತ್ರ ಹಾಗೂ ಮದ್ಯವರ್ತಿ ಹಲವು ಕೋಟಿ ರೂಪಾಯಿಗಳ ಕುರಿತು ಮಾತನಾಡುತ್ತಿರುವ ವೈರಲ್ ವೀಡಿಯೊವನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಅವರು ಈ ಆರೋಪ ಮಾಡಿದರು.
ರಾಜ್ಯದ ನಿಮಚ್ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ‘‘ಬಿಜೆಪಿ ನಾಯಕ ನರೇಂದ್ರ ಸಿಂಗ್ ತೋಮರ್ ಅವರ ಪುತ್ರನ ವೀಡಿಯೊವನ್ನು ನೀವು ನೋಡಲೇ ಬೇಕು. ಅವರು ನಿಮ್ಮ ಹಣವನ್ನು ಲೂಟಿಗೈಯುತ್ತಿದ್ದಾರೆ. ಬಿಜೆಪಿ ನಾಯಕರ ಲೂಟಿಯಿಂದ ರಾಜ್ಯದ ಜನತೆ ಸಂತ್ರಸ್ತರಾಗಿದ್ದಾರೆ’’ ಎಂದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸಲಾಗುವುದು ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.
ಪಕ್ಷ ಅಧಿಕಾರಕ್ಕೆ ಬಂದರೆ 500 ರೂ.ಗೆ ಎಲ್ಪಿಜಿ ಸಿಲಿಂಡರ್, 2 ಲಕ್ಷ ರೂ. ವರೆಗೆ ರೈತರ ಸಾಲ ಮನ್ನಾ, ಗೋಧಿಗೆ 2,600 ರೂ.ನಿಂದ 3,000 ರೂ. ವರೆಗೆ ಬೆಂಬಲ ಬೆಲೆ, 100 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಕೂಡ ರಾಹುಲ್ ಗಾಂಧಿ ಭರವಸೆ ನೀಡಿದರು.
ರಾಜ್ಯದಲ್ಲಿ ಸಾಲದ ಕಾರಣಕ್ಕಾಗಿ 18,000 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅವರು ಪ್ರತಿಪಾದಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಸಾಲ ಮನ್ನಾ ಪ್ರಾರಂಭಿಸಿದಾಗ, ತಮ್ಮ ಸರಕಾರವನ್ನು ಬಿಜೆಪಿ ಅಪಹರಿಸಿತು ಎಂದು ಅವರು ಹೇಳಿದರು.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ರೂಪಿಸಿತು. ಅದೇ ಕ್ಷಣದಿಂದ 27 ಲಕ್ಷ ಕೃಷಿಕರ ಸಾಲ ಮನ್ನಾ ಮಾಡುವ ಮೂಲಕ ರೈತರಿಗಾಗಿ ಕೆಲಸ ಮಾಡಲು ಆರಂಭಿಸಿತು. ಬಿಜೆಪಿ ದೊಡ್ಡ ಕೈಗಾರಿಕೋದ್ಯಮಿಗಳೊಂದಿಗೆ ಶಾಮೀಲಾಗಿ ರೈತರ, ಕಾರ್ಮಿಕರ ಹಾಗೂ ಅಂಗಡಿ ಮಾಲಿಕರ ಸರಕಾರವನ್ನು ಅಪಹರಿಸಿತು ಹಾಗೂ ಅಧಿಕಾರಕ್ಕೆ ಬಂತು ಎಂದು ರಾಹುಲ್ ಗಾಂಧಿ ಹೇಳಿದರು.