ನಾಳೆ ಮುಂಬೈನಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ
ಹೊಸದಿಲ್ಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ರವಿವಾರ ಮುಂಬೈನಲ್ಲಿ ಮಣಿ ಭವನದಿಂದ ಆಗಸ್ಟ್ ಕ್ರಾಂತಿ ಮೈದಾನದವರೆಗೆ ‘ನ್ಯಾಯ ಸಂಕಲ್ಪ ಪಾದಯಾತ್ರೆ ’ಯನ್ನು ನಡೆಸಲಿದ್ದಾರೆ ಎಂದು ಪಕ್ಷದ ನಾಯಕರೋರ್ವರು ತಿಳಿಸಿದರು.
ರಾಹುಲ್ ಕೈಗೊಂಡಿದ್ದ ‘ಭಾರತ ಜೋಡೊ ನ್ಯಾಯ ಯಾತ್ರೆ’ಯು ಶನಿವಾರ ಸಂಜೆ ಇಲ್ಲಿಯ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ‘ಚೈತ್ಯ ಭೂಮಿ’ಯಲ್ಲಿ ಅಂತ್ಯಗೊಂಡಿತು.
ಪಾದಯಾತ್ರೆಯಲ್ಲಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಗಳ ಗಣ್ಯ ವ್ಯಕ್ತಿಗಳು ರಾಹುಲ್ ಜೊತೆಗೂಡಲಿದ್ದಾರೆ. ಬಳಿಕ ರಾಹುಲ್ ಆಗಸ್ಟ್ ಕ್ರಾಂತಿ ಮೈದಾನ ಸಮೀಪದ ತೇಜಪಾಲ್ ಹಾಲ್ನಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡವರೊಂದಿಗೆ ಸಂವಾದವನ್ನು ನಡೆಸಲಿದ್ದಾರೆ ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ವಿಜಯ ವಡೆಟ್ಟಿವಾರ್ ಅವರ ಕಚೇರಿಯು ತಿಳಿಸಿದೆ.
ಮಹಾತ್ಮಾ ಗಾಂಧಿಯವರು ಮುಂಬೈನಲ್ಲಿ ಇದ್ದಾಗಲೆಲ್ಲ ಮಣಿ ಭವನದಲ್ಲಿ ಉಳಿದುಕೊಳ್ಳುತ್ತಿದ್ದರೆ, 1885,ಡಿ.28ರಂದು ತೇಜಪಾಲ್ ಹಾಲ್ನಲ್ಲಿ ಕಾಂಗ್ರೆಸ್ ಪಕ್ಷವು ಸ್ಥಾಪನೆಗೊಂಡಿತ್ತು.
ರವಿವಾರ ಮುಂಬೈನ ಶಿವಾಜಿ ಪಾರ್ಕ್ನಲ್ಲಿ ನಡೆಯುವ ರಾಹುಲ್ ಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್, ಎಸ್ಪಿ ಮುಖ್ಯಸ್ಥ ಅಖಿಲೇಶ ಯಾದವ್ ಸೇರಿದಂತೆ ಹಲವಾರು ‘ಇಂಡಿಯಾ’ ಮೈತ್ರಿಕೂಟ ನಾಯಕರು ಪಾಲ್ಗೊಳ್ಳಲಿದ್ದಾರೆ.