ಕುಸ್ತಿಪಟುಗಳನ್ನು ಭೇಟಿಯಾದ ರಾಹುಲ್ ಗಾಂಧಿ; ಬಜರಂಗ್ ಪುನಿಯಾ ಜೊತೆ ಮಾತುಕತೆ

Update: 2023-12-27 05:45 GMT

Photo: NDTV

ಹೊಸದಿಲ್ಲಿ: ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಸೇರಿದಂತೆ ದೇಶದ ಹಲವಾರು ಪ್ರಮುಖ ಕುಸ್ತಿಪಟುಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹರ್ಯಾಣದ ಝಜ್ಜರ್ ಜಿಲ್ಲೆಯಲ್ಲಿ ಇಂದು ಭೇಟಿಯಾಗಿದ್ದಾರೆ.

ಭಾರತೀಯ ಕುಸ್ತಿ ಒಕ್ಕೂಟದ ಚುನಾವಣಾ ಫಲಿತಾಂಶದ ನಂತರ ಹಲವಾರು ಕುಸ್ತಿಪಟುಗಳು ತಮ್ಮ ಪ್ರಶಸ್ತಿಗಳನ್ನು ಪ್ರತಿಭಟನಾರ್ಥವಾಗಿ ಹಿಂದಿರುಗಿಸುತ್ತಿರುವ ಬೆನ್ನಿಗೇ ಈ ಭೇಟಿ ನಡೆದಿದೆ. ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬೃಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ವರ್ಷಾರಂಭದಲ್ಲಿ ತಮ್ಮ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದ್ದರಿಂದಾಗಿ ಬಿಜೆಪಿ ಸಂಸದ ಬೃಜ್ ಭೂಷಣ್ ಶರಣ್ ಸಿಂಗ್ ತಮ್ಮ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಬೇಕಾಗಿ ಬಂದಿತ್ತು.

ಬಜರಂಗ್ ಪುನಿಯಾ, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ ವಿನೇಶ್ ಫೋಗಟ್ ಹಾಗೂ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿದ್ದ ಸಾಕ್ಷಿ ಮಲಿಕ್ ಅವರು ಬೃಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ರಾಹುಲ್ ಗಾಂಧಿ ಭೇಟಿಯ ಕುರಿತು ಪ್ರತಿಕ್ರಿಯಿಸಿದ ಬಜರಂಗ್ ಪುನಿಯಾ, "ಅವರು ನಮ್ಮ ಕುಸ್ತಿ ದಿನಚರಿಯನ್ನು ವೀಕ್ಷಿಸಲು ಬಂದಿದ್ದರು. ಅವರೂ ಕೂಡಾ ಕುಸ್ತಿ ಅಭ್ಯಾಸ ಮಾಡಿದರು. ಅವರು ಕುಸ್ತಿಪಟುವೊಬ್ಬರ ದೈನಂದಿನ ಚಟುವಟಿಕೆಗಳನ್ನು ನೋಡಲು ಬಂದಿದ್ದರು" ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News