ಮಾನಹಾನಿ ಪ್ರಕರಣ ರದ್ದು ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ
ಮುಂಬೈ : ಪತ್ರಕರ್ತೆ ಗೌರಿ ಲಂಕೇಶ್ ಅವರ ಕೊಲೆಗೆ ಆರೆಸ್ಸೆಸ್ ಕಾರಣ ಎಂಬ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ ಮಾನಹಾನಿ ಪ್ರಕರಣದ ಕುರಿತು ಮುಂಬೈ ನ್ಯಾಯಾಲಯವು ಸಂಜ್ಞೇಯ ಅಪರಾಧ ಎಂದು ಪರಿಗಣಿಸಿ ಆದೇಶ ಮಾಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು barandbench.com ವರದಿ ಮಾಡಿದೆ.
ಪ್ರಕರಣವು ಮಂಗಳವಾರ ನ್ಯಾ.ಎಸ್ ವಿ ಕೊತ್ವಾಲ್ ಅವರ ಮುಂದೆ ವಿಚಾರಣೆಗೆ ಬರಬೇಕಿತ್ತು. ಅದನ್ನು ಡಿ.5ಕ್ಕೆ ಮುಂದೂಡಲಾಗಿದೆ.
ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರ ವಿರುದ್ಧ ಮುಂಬೈ ವಕೀಲ ಧ್ರುತಿಮಾನ್ ಜೋಶಿ ನೀಡಿದ ದೂರಿನ ಅನ್ವಯ ಕ್ರಿಮಿನಲ್ ಪ್ರಕ್ರಿಯೆ ಆರಂಭಿಸಲಾಗಿದೆ.
ಸಂಸತ್ ಹೊರಗೆ 2017ರ ಸೆಪ್ಟೆಂಬರ್‌ನಲ್ಲಿ ರಾಹುಲ್ ರಾಷ್ಟ್ರೀಯ ಮಾಧ್ಯಮಗಳ ಜೊತೆ ಮಾತನಾಡುವಾಗ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ ಎಂದು ದೂರುದಾರ ವಕೀಲ ಹೇಳಿದ್ದಾರೆ. ಸೀತಾರಾಂ ಯೆಚೂರಿ ಅವರು ಇಂಥದ್ದೇ ಹೇಳಿಕೆಯನ್ನು ನೀಡಿದ್ದರು ಎನ್ನಲಾಗಿದೆ.
ಆರ್‌ಎಸ್‌ಎಸ್‌ನ ಕಾರ್ಯಕರ್ತನಾಗಿರುವುದರಿಂದ ರಾಹುಲ್ ಹೇಳಿಕೆಯಿಂದ ಅವಮಾನವಾಗುದ್ದು, ಸಂಘಟನೆಯ ಜೊತೆ ಗುರುತಿಸಿಕೊಂಡಿರುವುದಕ್ಕೆ ನಿಂದನೆ ಮಾಡಿದಂತಾಗಿದೆ. 2019ರ ಫೆಬ್ರವರಿ 18ರಂದು ಬೊರಿವೆಲಿ ಮ್ಯಾಜಿಸ್ಟ್ರೇಟ್ ಅವರು ರಾಹುಲ್ ಮತ್ತು ಯೆಚೂರಿ ವಿರುದ್ದ ಸಂಜ್ಞೇಯ ಅಪರಾಧ ಎಂದು ಪರಿಗಣಿಸಿದ್ದು, ಸೋನಿಯಾ ಗಾಂಧಿ ಅವರ ವಿರುದ್ಧದ ದೂರು ವಜಾ ಮಾಡಿದ್ದರು.
2019ರ ಜುಲೈ 4 ರಂದು ಬೊರಿವಿಲಿ ನ್ಯಾಯಾಲಯದ ಮುಂದೆ ರಾಹುಲ್ ಮತ್ತು ಯೆಚೂರಿ ಹಾಜರಾಗಿ, ಅರ್ಜಿ ಸಲ್ಲಿಸಿದ್ದರು. ಇಬ್ಬರಿಗೂ ಜಾಮೀನು ದೊರೆತಿದ್ದು, ನ್ಯಾಯಾಲಯವು ವಿಚಾರಣೆ ಮುಂದುವರಿಸಿದೆ.
ತಾನು ಮತ್ತು ಯೆಚೂರಿ ಅವರು ವಿಭಿನ್ನ ಸ್ಥಳಗಳಲ್ಲಿ ಹೇಳಿಕೆ ನೀಡಿದ್ದು, ಅವುಗಳೆರಡನ್ನೂ ಒಟ್ಟಿಗೆ ವಿಚಾರಣೆ ನಡೆಸಲಾಗದು. ಈ ಹಿನ್ನೆಲೆಯಲ್ಲಿ ದೂರು ವಜಾ ಮಾಡಬೇಕು ಎಂದು ಕೋರಿದ್ದ ರಾಹುಲ್ ಅರ್ಜಿಯನ್ನು 2019ರ ನವೆಂಬರ್‌ನಲ್ಲಿ ಮ್ಯಾಜಿಸ್ಟ್ರೇಟ್ ವಜಾ ಮಾಡಿದ್ದರು. ಇದನ್ನೇ ರಾಹುಲ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.