ಅಮೃತಸರದ ಸ್ವರ್ಣ ಮಂದಿರದಲ್ಲಿ ಸ್ವಯಂಸೇವಕನಾಗಿ ಪಾತ್ರೆ ತೊಳೆದ ರಾಹುಲ್ ಗಾಂಧಿ: ವೀಡಿಯೊ ವೈರಲ್
ಅಮೃತಸರ: ಪಂಜಾಬ್‌ನ ಅಮೃತಸರದ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಭಕ್ತರು ಬಳಸಿದ ನೀರಿನ ಬಟ್ಟಲುಗಳನ್ನು ಶುಚಿಗೊಳಿಸುವ ಮೂಲಕ ಸೇವಾ ಕಾರ್ಯ ಮಾಡಿದ್ದಾರೆ.
ಸೋಮವಾರ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ನಂತರ ಅವರು, ಸಿಖ್ಖರ ಅತ್ಯುನ್ನತ ತಾತ್ಕಾಲಿಕ ಸ್ಥಾನವಾದ ಅಕಲ್ ತಖ್ತ್‌ಗೆ ಭೇಟಿ ನೀಡಿದ್ದು, ಭಕ್ತರು ಬಳಸುವ ನೀರಿನ ಬಟ್ಟಲುಗಳನ್ನು ಸ್ವಚ್ಛಗೊಳಿಸುವ ವೀಡಿಯೊ ವೈರಲ್ ಆಗಿದೆ.
ಸ್ವರ್ಣ ಮಂದಿರದ ಗರ್ಭಗುಡಿಯಲ್ಲಿ ಜನಸಮೂಹದ ನಡುವೆ ರಾಹುಲ್ ಗಾಂಧಿಯವರು ಕೈಮುಗಿದು ಪ್ರಾರ್ಥನೆ ಸಲ್ಲಿಸುತ್ತಿರುವುದು ವೀಡಿಯೊದಲ್ಲಿದೆ. ಇತರ ಭಕ್ತರ ನಡುವೆ ಕುಳಿತು, ಪಾತ್ರೆಗಳನ್ನು ತೊಳೆಯುತ್ತಿರುವುದು ವೀಡಿಯೊದಲ್ಲಿ ಕಾಣಿಸುತ್ತದೆ.
ರಾಹುಲ್ ಗಾಂಧಿ ನಾಳೆ ಬೆಳಗ್ಗೆ (ಮಂಗಳವಾರ) ನಡೆಯುವ ‘ಪಾಲ್ಕಿ ಸೇವೆ’ಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯೂ ಇದೆ. ಅವರು ದರ್ಬಾರ್ ಸಾಹಿಬ್ ಬಳಿಯ ಖಾಸಗಿ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿದ್ದಾರೆ, ಭದ್ರತಾ ಸಿಬ್ಬಂದಿಗೆ ಖಾಸಗಿ ಹೋಟೆಲ್‌ನಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರೀಂದರ್ ಸಿಂಗ್ ರಾಜಾ ವಾರಿಂಗ್ ತಿಳಿಸಿದ್ದಾರೆ.