ತಮಿಳುನಾಡಿನಲ್ಲಿ ಮಳೆ ಅವಾಂತರ : ಮುಚ್ಚಿದ ಶಾಲೆಗಳು, ತೀವ್ರಗೊಂಡ ಪರಿಹಾರ ಕಾರ್ಯಾಚರಣೆ

Update: 2023-12-21 16:08 GMT

Photo: PTI 

ಚೆನ್ನೈ: ನಿರಂತರ ಮಳೆಯಿಂದಾಗಿ ತತ್ತರಿಸಿರುವ ತಮಿಳುನಾಡಿನಲ್ಲಿ ವ್ಯಾಪಕ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಭಾರತೀಯ ವಾಯುಪಡೆ ಮತ್ತು ನೌಕಾಪಡೆ,ತಟ ರಕ್ಷಣಾ ಪಡೆಗಳೊಂದಿಗೆ ರಾಜ್ಯ ಮತ್ತು ಕೇಂದ್ರದ ಅಧಿಕಾರಿಗಳು ಈ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದಾರೆ. ದಕ್ಷಿಣ ತಮಿಳುನಾಡಿನ ತೀವ್ರ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವವರನ್ನು ಹೆಲಿಕಾಪ್ಟರ್ ಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗುತ್ತಿದ್ದು, ಆಹಾರ ಮತ್ತು ಪರಿಹಾರ ಸಾಮಗ್ರಿಗಳ ವಿತರಣೆಗೆ ರಕ್ಷಣಾ ತಂಡಗಳು ಆದ್ಯತೆ ನೀಡಿವೆ.

ಈ ಬಿಕ್ಕಟ್ಟಿನ ಸಂದರ್ಭದಲ್ಲಿ ತಮಿಳುನಾಡಿಗೆ ಸಮಗ್ರ ನೆರವು ಒದಗಿಸಲು ಕೇಂದ್ರದ ಬದ್ಧತೆಯನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಕಚೇರಿಯು ಪುನರುಚ್ಚರಿಸಿದೆ. ಭಾರತೀಯ ಹವಾಮಾನ ಇಲಾಖೆಯು ಪ್ರದೇಶದಲ್ಲಿ ಮುಂದಿನ ಆರು ದಿನಗಳ ಕಾಲ ಲಘು ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ.

ರಾಜ್ಯ ಸರಕಾರವು ಪರಿಹಾರ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಅಗತ್ಯ ಸಾಮಗ್ರಿಗಳನ್ನು ಸಾಗಿಸಲು ಭಾರತೀಯ ತಟ ರಕ್ಷಣಾ ಪಡೆಯ ಹೆಲಿಕಾಪ್ಟರ್ ಗಳನ್ನು ಬಳಸಿಕೊಳ್ಳುತ್ತಿದೆ. ತೂತ್ತುಕುಡಿಯ ಅಲಂಥಲೈನಲ್ಲಿ ಭಾರೀ ಮಳೆಯಿಂದಾಗಿ ವ್ಯಾಪಕ ನೆರೆಯುಂಟಾಗಿದ್ದು, ಮನೆಗಳಿಗೆ ಹಾನಿಯಾಗಿವೆ ಮತ್ತು ರಸ್ತೆಗಳಲ್ಲಿ ನೀರು ತುಂಬಿಕೊಂಡಿದೆ.

ಗುರುವಾರ ತಿರುನೆಲ್ವೆಲಿ ಜಿಲ್ಲೆಯ ಎಲ್ಲ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಪರಿಹಾರ ಶಿಬಿರಗಳಾಗಿ ಪರಿವರ್ತಿಸಲಾಗಿರುವ ಕಾಲೇಜುಗಳನ್ನು ಹೊರತು ಪಡಿಸಿ ಇತರ ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ತೂತ್ತುಕುಡಿಯ ಕೆಟಿಆರ್ ನಗರ ಸೇರಿದಂತೆ ಜಲಾವೃತ ಪ್ರದೇಶಗಳಲ್ಲಿ ಅತಂತ್ರರಾಗಿರುವವರಿಗೆ ಎನ್ ಡಿ ಆರ್ ಎಫ್ ತಂಡಗಳು ಆಹಾರ ಮತ್ತು ಪರಿಹಾರ ಸಾಮಗ್ರಿಗಳನ್ನು ವಿತರಿಸುತ್ತಿವೆ.

ತೂತ್ತುಕುಡಿ ವಿಮಾನ ನಿಲ್ದಾಣದಿಂದ ವಿಮಾನಯಾನಗಳು ಪುನರಾರಂಭಗೊಂಡಿವೆ. ಆದರೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಗೆ ವ್ಯತ್ಯಯ ಮುಂದುವರಿದಿದೆ.

10 ಹೆಲಿಕಾಪ್ಟರ್ ಗಳು ಮತ್ತು 323 ದೋಣಿಗಳನ್ನು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಲಾಗಿದ್ದು, 27 ಟನ್ ಗಳಷ್ಟು ಆಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ.

ಶ್ರೀವೈಕುಂಠಂ ನಿಲ್ದಾಣದಲ್ಲಿ ಸಿಕ್ಕಿಕೊಂಡಿದ್ದ ಪ್ರಯಾಣಿಕರನ್ನು ಹೊತ್ತ ವಿಶೇಷ ರೈಲು ಗುರುವಾರ ಚೆನ್ನೈಗೆ ಆಗಮಿಸಿದೆ. ಮಳೆಯ ಅಬ್ಬರದಿಂದಾಗಿ ತಿರುನೆಲ್ವೆಲಿ, ತೂತ್ತುಕುಡಿ, ತೆಂಕಾಸಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ 10 ಜನರು ಮೃತಪಟ್ಟಿದ್ದಾರೆ.

ತೂತ್ತುಕುಡಿ ಜಿಲ್ಲೆಯ ಕಯಲಪಟ್ಟಿಣಂ ನಲ್ಲಿ ಎರಡು ದಿನಗಳಲ್ಲಿ 1,192 ಮಿ.ಮೀ.ಗಳಷ್ಟು ಭಾರೀ ಮಳೆಯಾಗಿದ್ದು, ಇದು ಪರಿಸ್ಥಿತಿಯ ತೀವ್ರತೆಯನ್ನು ಸೂಚಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News