ಮತದಾರರಲ್ಲಿ ಅನುರಣಿಸಲು ರಾಮಮಂದಿರ ವಿಫಲ: ಫೈಝಾಬಾದ್ ಕ್ಷೇತ್ರದಲ್ಲಿ ಬಿಜೆಪಿಗೆ ಭಾರೀ ಮುಖಭಂಗ

Update: 2024-06-04 15:55 GMT

ಸಾಂದರ್ಭಿಕ ಚಿತ್ರ

ಫೈಜಾಬಾದ್(ಉ.ಪ್ರ): ಅಯೋಧ್ಯೆಯನ್ನು ಒಳಗೊಂಡಿರುವ ಫೈಝಾಬಾದ್ ಲೋಕಸಭಾ ಕ್ಷೇತ್ರದಲ್ಲಿ ರಾಮಮಂದಿರ ಅಂಶವು ಬಿಜೆಪಿಗೆ ಯಾವುದೇ ಲಾಭವನ್ನು ನೀಡಿಲ್ಲ. ಎರಡು ಬಾರಿಯ ಹಾಲಿ ಸಂಸದ ಲಲ್ಲು ಸಿಂಗ್ ಅವರು ಸಮಾಜವಾದಿ ಪಕ್ಷ (ಎಸ್ಪಿ)ದ ಅವಧೇಶ ಪ್ರಸಾದರಿಂದ ಪರಾಭವಗೊಂಡಿದ್ದು,ಬಿಜೆಪಿ ತೀವ್ರ ಮುಖಭಂಗವನ್ನು ಅನುಭವಿಸಿದೆ.

ಎಸ್ಪಿಯ ಹಿರಿಯ ನಾಯಕ ಹಾಗೂ ಮಿಲ್ಕಿಪುರ ಶಾಸಕ ಪ್ರಸಾದ ಗಣನೀಯ ಅಂತರದಿಂದ ಗೆಲುವು ಸಾಧಿಸಿದ್ದಾರೆ.

1977ರಲ್ಲಿ ಅಯೋಧ್ಯೆಯ ಸೋಹಾವಲ್ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ತನ್ನ ರಾಜಕೀಯ ಪಯಣವನ್ನು ಆರಂಭಿಸಿದ್ದ ಪ್ರಸಾದ 1985,1989,1993,1996, 2002,2007 ಮತ್ತು 2012ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು.

2017ರ ವಿಧಾನಸಭಾ ಚುನಾವಣೆಯಲ್ಲಿ ಮಿಲ್ಕಿಪುರ ಕ್ಷೇತ್ರದಲ್ಲಿ ಬಿಜೆಪಿಯ ಗೋರಖನಾಥ ಬಾಬಾರಿಂದ ಸೋಲನ್ನುಂಡಿದ್ದ ಪ್ರಸಾದ 2022ರಲ್ಲಿ ಅದೇ ಕ್ಷೇತ್ರದಲ್ಲಿ ಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿಯೆದುರು ಗೆಲುವು ಸಾಧಿಸಿದ್ದರು.

ಪ್ರಸಾದ ಗೆಲುವಿನ ಮೂಲಕ ಸಾಮಾನ್ಯ ಕ್ಷೇತ್ರದಲ್ಲಿ ದಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಎಸ್ಪಿಯ ಪ್ರಯೋಗ ಯಶಸ್ವಿಯಾಗಿದೆ.

ಈ ವರ್ಷದ ಜ.22ರಂದು ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಉದ್ಘಾಟಿಸಿದ ಬಳಿಕ ಇದೇ ಮೊದಲ ಬಾರಿಗೆ ಫೈಜಾಬಾದ್ ಲೋಕಸಭಾ ಕ್ಷೇತ್ರದ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ರಾಜಕೀಯ ವೀಕ್ಷಕರ ಪ್ರಕಾರ ಕಮಂಡಲ(ಹಿಂದುತ್ವ ರಾಜಕೀಯ) ಮತ್ತು ಮಂಡಲ್ (ಹಿಂದುಳಿದ ಜಾತಿಗಳಿಗೆ ಮೀಸಲಾತಿಯ ಮಂಡಲ್ ವರದಿ) ನಡುವೆ ಸರಿಯಾದ ಸಮತೋಲನ ಕಾಯ್ದುಕೊಳ್ಳುವಲ್ಲಿ ಬಿಜೆಪಿಯ ವೈಫಲ್ಯವು ಅದರ ಸೋಲಿಗೆ ನಿರ್ಣಾಯಕ ಅಂಶವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News