ರಾಮನವಮಿ ಹಿಂಸಾಚಾರ: ಎನ್ಐಎ ತನಿಖೆಯ ವಿರುದ್ಧ ಪ.ಬಂಗಾಳದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ರಾಜ್ಯದಲ್ಲಿ ರಾಮನವಮಿ ಉತ್ಸವದ ಸಂದರ್ಭದಲ್ಲಿ ಸಂಭವಿಸಿದ್ದ ಹಿಂಸಾಚಾರದ ತನಿಖೆಯನ್ನು ಎನ್ಐಎಗೆ ವರ್ಗಾಯಿಸಿರುವುದನ್ನು ಪ್ರಶ್ನಿಸಿ ಪ.ಬಂಗಾಳ ಸರಕಾರವು ಸಲ್ಲಿಸಿದ್ದ ಮೇಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ವಜಾಗೊಳಿಸಿದೆ.
ಪ.ಬಂಗಾಳ ಸರಕಾರವು ಕೇಂದ್ರ ಸರಕಾರದ ಅಧಿಸೂಚನೆಯ ಮೂಲಕ ಈ ವಿಷಯವನ್ನು ಗಮನಕ್ಕೆ ತೆಗೆದುಕೊಂಡಿತ್ತಾದರೂ ಅದು ಅಧಿಸೂಚನೆಯನ್ನು ಪ್ರಶ್ನಿಸಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ ಮಿಶ್ರಾ ಅವರ ಪೀಠವು ಬೆಟ್ಟು ಮಾಡಿತು.
‘ಎನ್ಐಎ ನಡೆಸಬೇಕಾದ ತನಿಖೆಯ ರೂಪುರೇಷೆಯನ್ನು ಈ ಹಂತದಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮತ್ತು ಕೇಂದ್ರ ಸರಕಾರದ ಅಧಿಸೂಚನೆಗೆ ಸವಾಲಿನ ಅನುಪಸ್ಥಿತಿಯಲ್ಲಿ ನಾವು ಈ ಅರ್ಜಿಯನ್ನು ಪರಿಗಣಿಸುವುದಿಲ್ಲ ’ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತು.
ಮಾ.30ರಿಂದ ಎ.2ರವರೆಗೆ ಹೌರಾ ಸೇರಿದಂತೆ ಪ.ಬಂಗಾಳದ ವಿವಿಧೆಡೆಗಳಲ್ಲಿ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಹಿಂದುಗಳು ಮತ್ತು ಮುಸ್ಲಿಮರ ನಡುವೆ ಘರ್ಷಣೆಗಳು ನಡೆದಿದ್ದವು.
ಎ.27ರಂದು ಕೋಲ್ಕತಾ ಉಚ್ಚ ನ್ಯಾಯಾಲಯವು ಹಿಂಸಾಚಾರದ ತನಿಖೆಯನ್ನು ಎನ್ಐಎಗೆ ವರ್ಗಾಯಿಸುವಂತೆ ಆದೇಶಿಸಿತ್ತು.