ನಮ್ಮ ಸರ್ಕಾರಕ್ಕೆ ರಾಮ ರಾಜ್ಯವೇ ಸ್ಫೂರ್ತಿ: ಕೇಜ್ರಿವಾಲ್
ಹೊಸದಿಲ್ಲಿ: ನಮ್ಮ ಸರ್ಕಾರಕ್ಕೆ ರಾಮರಾಜ್ಯದ 10 ತತ್ವಗಳೇ ಸ್ಫೂರ್ತಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ. ಇದರಲ್ಲಿ ಬಡವರಿಗೆ ಉಚಿತ ಪಡಿತರ, ನಿರಾಶ್ರಿತರಿಗೆ ಆಸರೆ, ಉಚಿತ ವಿದ್ಯುತ್, ನೀರು, ಶಿಕ್ಷಣ, ಆರೋಗ್ಯ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಾಗೂ ವೃದ್ಧರಿಗೆ ತೀರ್ಥಯಾತ್ರೆಗೆ ನೆರವು ಇದರಲ್ಲಿ ಸೇರಿವೆ ಎಂದು ಹೇಳಿದ್ದಾರೆ.
ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾದ ಕ್ಷಣ ಇಡೀ ದೇಶಕ್ಕೆ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ ಅವರು, ನಾವು ರಾಮನನ್ನು ಪೂಜಿಸುವುದು ಎಷ್ಟು ಮುಖ್ಯವೋ, ನಮ್ಮ ಬದುಕನ್ನು ಹಸನು ಮಾಡಿಕೊಳ್ಳಲು ಆತನ ಜೀವನದಿಂದ ಸ್ಫೂರ್ತಿ ಪಡೆಯುವುದೂ ಮುಖ್ಯ. ಜಾತಿ ಮತ್ತು ಧರ್ಮದ ಆಧಾರದಲ್ಲಿ ರಾಮ ಎಂದಿಗೂ ತಾರತಮ್ಯ ಮಾಡಿರಲಿಲ್ಲ ಎಂದರು.
ಛತ್ರಸಾಲ್ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಸಾಧ್ಯವಾದಷ್ಟು ಮಂದಿಯನ್ನು ಅಯೋಧ್ಯೆಗೆ ಕರೆದೊಯ್ಯಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ತೆರೆದ ಜೀಪ್ ನಲ್ಲಿ ದೆಹಲಿ ಪೊಲೀಸ್, ಗೃಹರಕ್ಷಕ ದಳ, ದೆಹಲಿ ಅಗ್ನಿಶಾಮಕ ಸೇವೆ, ಎನ್ ಸಿಸಿ ಮತ್ತು ಸರ್ಕಾರಿ ಶಾಲಾಮಕ್ಕಳ ಪರೇಡ್ ವೀಕ್ಷಿಸಿದ ಅವರು, ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ ಮತ್ತು ಗೌರವ ಸಲ್ಲಿಸುತ್ತಿದ್ದೇನೆ ಎಂದರು.
ರಾಮರಾಜ್ಯದ ಪರಿಕಲ್ಪನೆಯಿಂದ ನಮ್ಮ ಸರ್ಕಾರ ಸ್ಫೂರ್ತಿ ಪಡೆದಿದೆ. ಆಡಳಿತಕ್ಕೆ ನಾವು 10 ಅಂಶಗಳ ಕಾರ್ಯಕ್ರಮ ರೂಪಿಸಿದ್ದೇವೆ. ಮೊದಲನೆಯದಾಗಿ ಯಾರೂ ಹಸಿದಿರಬಾರದು; ಅದಕ್ಕಾಗಿ ಬಡವರಿಗೆ ಉಚಿತ ಪಡಿತರ. ನಿರಾಶ್ರಿತರಿಗೆ ಮನೆಯನ್ನೂ ಕಟ್ಟಿಕೊಟ್ಟಿದ್ದೇವೆ. ನಾವು ಶೇಕಡ 100ರಷ್ಟು ಗುರಿ ಸಾಧಿಸಿದ್ದೇವೆ ಎಂದು ಹೇಳಲಾರೆ. ಆದರೆ ಆ ಪ್ರಯತ್ನದಲ್ಲಿದ್ದೇವೆ ಎಂದು ಬಣ್ಣಿಸಿದರು.