ನಟನಿಗೆ ಲೈಂಗಿಕ ದೌರ್ಜನ್ಯದ ಆರೋಪ | ಕರ್ನಾಟಕ ಪೋಲಿಸರಿಂದ ಮಲಯಾಳಂ ನಿರ್ದೇಶಕ ರಂಜಿತ್ ವಿರುದ್ಧ ಪ್ರಕರಣ ದಾಖಲು

Update: 2024-10-29 14:49 GMT

ರಂಜಿತ್ ಬಾಲಕೃಷ್ಣನ್ | PC : X  

ಬೆಂಗಳೂರು : 31ರ ಹರೆಯದ ನಟನೋರ್ವನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಮಲಯಾಳಂ ಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ವಿರುದ್ಧ ಶನಿವಾರ ಬೆಂಗಳೂರು ವಿಮಾನ ನಿಲ್ದಾಣ ಪೋಲಿಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಅನಾಮಿಕ ಪೋಲಿಸ್ ಅಧಿಕಾರಿಯೋರ್ವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

2012ರಲ್ಲಿ ಕೋಝಿಕೋಡ್‌ನಲ್ಲಿ ‘ಬಾವುಟ್ಟಿಯುಡೆ ನಾಮತ್ತಿಲ್ ’ ಚಲನಚಿತ್ರದ ಶೂಟಿಂಗ್ ನಡೆಯುತ್ತಿದ್ದಾಗ ನಟ ಮಮ್ಮೂಟಿಯವರನ್ನು ಭೇಟಿಯಾಗಲು ತಾನು ಅಲ್ಲಿಗೆ ತೆರಳಿದ್ದಾಗ ಚಿತ್ರದ ನಿರ್ಮಾಪಕ ರಂಜಿತ್ ಪರಿಚಯವಾಗಿತ್ತು. ಬಳಿಕ 2012 ಡಿಸೆಂಬರ್‌ನಲ್ಲಿ ರಂಜಿತ್ ತನ್ನನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹೋಟೇಲ್‌ವೊಂದಕ್ಕೆ ಆಹ್ವಾನಿಸಿದ್ದರು. ಆ ಸಂದರ್ಭದಲ್ಲಿ ತನಗೆ ಮದ್ಯಪಾನ ಮಾಡಿಸಿ ತನ್ನ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದರು ಎಂದು ನಟ ದೂರಿನಲ್ಲಿ ಆರೋಪಿಸಿದ್ದಾರೆ.

ಆರಂಭದಲ್ಲಿ ದೂರು ಕೇರಳದ ಪೋಲಿಸ್ ಠಾಣೆಯಲ್ಲಿ ದಾಖಲಾಗಿತ್ತು. ಆದರೆ ಆರೋಪಿತ ಘಟನೆ ಬೆಂಗಳೂರಿನಲ್ಲಿ ನಡೆದಿದ್ದರಿಂದ ಪ್ರಕರಣವನ್ನು ಇಲ್ಲಿಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ತನ್ನ ವರದಿಯಲ್ಲಿ ಹೇಳಿದೆ.

ಘಟನೆಯು 2012ರಲ್ಲಿಯೇ ನಡೆದಿತ್ತಾದರೂ ದೂರು ಈಗ ದಾಖಲಾಗಿದೆ. ನ್ಯಾ.ಹೇಮಾ ವರದಿ ಬಿಡುಗಡೆಯ ಬಳಿಕ ಮಲಯಾಳಂ ಚಿತ್ರರಂಗದ ಹಲವಾರು ಕಲಾವಿದರು ಲೈಂಗಿಕ ಕಿರುಕುಳ ಆರೋಪಗಳನ್ನು ಮಾಡಿದ್ದು ದೂರುದಾರನಿಗೆ ದೂರು ಸಲ್ಲಿಸಲು ಧೈರ್ಯ ನೀಡಿತ್ತು ಎಂದೂ ಅಧಿಕಾರಿ ತಿಳಿಸಿದ್ದಾರೆ.

ನಟಿಯೋರ್ವರು ರಂಜಿತ್ 2009ರಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ರಂಜಿತ್ ಆಗಸ್ಟ್‌ ನಲ್ಲಿ ಸರಕಾರದ ಅಧೀನದ ಕೇರಳ ಚಲಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

‘ಪಲೇರಿ ಮಾಣಿಕ್ಯಂ’ ಚಿತ್ರ ನಿರ್ಮಾಣದ ಸಂದರ್ಭ ರಂಜಿತ್ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ನಟಿ ಆರೋಪಿಸಿದ್ದರು.

ಆರೋಪವನ್ನು ನಿರಾಕರಿಸಿದ್ದ ರಂಜಿತ್, ಇದು ತನ್ನ ವಿರುದ್ದ ಸಂಘಟಿತ ದಾಳಿಯ ಭಾಗವಾಗಿದೆ ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News