ರತನ್ ಟಾಟಾರ ಕಿರಿಯ ಸೋದರ ಜಿಮ್ಮಿ ಟಾಟಾ ಇರುವುದು 2 BHK ಫ್ಲ್ಯಾಟ್‌ನಲ್ಲಿ, ಮೊಬೈಲ್ ಫೋನ್ ಕೂಡ ಇಲ್ಲ!

Update: 2024-10-10 15:08 GMT

ಜಿಮ್ಮಿ ಟಾಟಾ , ರತನ್ ಟಾಟಾ | PC : X 

ಮುಂಬೈ : ರತನ್ ಟಾಟಾ ಅವರ ಹೆಸರು ಉದ್ಯಮ, ಲೋಕೋಪಕಾರ ಮತ್ತು ಹೊಸ ಕಲ್ಪನೆಗಳಿಗೆ ಇನ್ನೊಂದು ಅರ್ಥವಾಗಿದೆ. ಜೊತೆಗೆ ಇತರ ಕೈಗಾರಿಕೋದ್ಯಮಿಗಳಿಗಿಂತ ಬಹಳ ಹಿಂದೆಯೇ ಭಾರತವನ್ನು ಜಾಗತಿಕ ವೇದಿಕೆಯಲ್ಲಿ ಇರಿಸಿತ್ತು. ಆದರೆ ಅವರ ಕಿರಿಯ ಸೋದರ, ಹೆಚ್ಚು ಸರಳ ಮತ್ತು ಶಾಂತ ಜೀವನವನ್ನು ನಡೆಸುತ್ತಿರುವ ಜಿಮ್ಮಿ ಟಾಟಾರ ಪರಿಚಯ ಹೆಚ್ಚಿನವರಿಗಿಲ್ಲ.

ಜಿಮ್ಮಿ, ರತನ್‌ಗಿಂತ ಭಿನ್ನವಾಗಿ ಜನಮನದಿಂದ ದೂರವಿರಲು ಬಯಸುತ್ತಾರೆ. ಆದರೆ ಅವರ ವಿನಮ್ರ ಜೀವನಶೈಲಿ ಇತ್ತೀಚಿಗೆ ಗಮನವನ್ನು ಸೆಳೆದಿದೆ. ಜಿಮ್ಮಿ ಕುರಿತು ನಿಕಟ ನೋಟವಿಲ್ಲಿದೆ...

ಜಿಮ್ಮಿ ನವಲ್ ಟಾಟಾ ಟಾಟಾ ಗ್ರೂಪ್‌ನಲ್ಲಿ ಗಮನಾರ್ಹ ಪಾಲು ಹೊಂದಿದ್ದರೂ ಕುಟುಂಬದ ವ್ಯವಹಾರದಲ್ಲಿ ಹೆಚ್ಚಿನ ಆಸಕ್ತಿ ತೋರಿಸದೆ ತನ್ನ ಬದುಕಿನುದ್ದಕ್ಕೂ ಎಲೆಮರೆಯ ಕಾಯಿಯಂತಿದ್ದಾರೆ.

ಜಿಮ್ಮಿಯವರ ಸರಳ ಜೀವನಶೈಲಿ ಬಹಳ ಹಿಂದಿನಿಂದಲೂ ಜನರಲ್ಲಿ ಕುತೂಹಲ ಕೆರಳಿಸಿತ್ತು. ,ಆದರೆ ಜಿಮ್ಮಿ ಜನ್ಮದಿನದಂದು ರತನ್ ತಾವಿಬ್ಬರೂ ಜೊತೆಯಲ್ಲಿದ್ದ ಕಪ್ಪುಬಿಳುಪು ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಬಳಿಕ ವ್ಯಾಪಕ ಕುತೂಹಲವನ್ನುಂಟು ಮಾಡಿತ್ತು. ಚಿತ್ರಕ್ಕೆ ನೀಡಿದ್ದ ‘ಅವು ಸಂತಸದ ದಿನಗಳಾಗಿದ್ದವು,ನಮ್ಮ ನಡುವೆ ಯಾವುದೂ ತಲೆ ಹಾಕಿರಲಿಲ್ಲ(1945ರಲ್ಲಿ ನನ್ನ ಸೋದರ ಜಿಮ್ಮಿಯೊಂದಿಗೆ)’ ಎಂಬ ಅಡಿಬರಹ ಅವರಿಬ್ಬರೂ ಈಗಲೂ ನಿಕಟ ಸಂಬಂಧವನ್ನು ಹಂಚಿಕೊಂಡಿದ್ದಾರೆ ಎಂದು ಸೂಚಿಸಿತ್ತು.

ಈ ಹಿಂದೆ ಆರ್‌ಪಿಜಿ ಎಂಟರ್‌ಪ್ರೈಸಸ್ ಅಧ್ಯಕ್ಷ ಹರ್ಷವರ್ಧನ ಗೋಯೆಂಕಾ ಅವರು ಜಿಮ್ಮಿಯವರ ಸಾಧಾರಣ ಬದುಕಿನ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಜಿಮ್ಮಿ ಮುಂಬೈನ ಕೊಲಾಬಾದಲ್ಲಿನ ಹ್ಯಾಂಪ್ಟನ್ ಕೋರ್ಟ್‌ನ ಆರನೇ ಅಂತಸ್ತಿನಲ್ಲಿಯ ಸರಳವಾದ ಎರಡು ಬೆಡ್‌ರೂಮ್‌ಗಳ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದಾರೆ ಮತ್ತು ಅತ್ಯುತ್ತಮ ಸ್ಕ್ವಾಷ್ ಆಟಗಾರನಾಗಿದ್ದಾರೆ ಎನ್ನುವುದನ್ನು ಗೊಯೆಂಕಾ ಬಹಿರಂಗಗೊಳಿಸಿದ್ದರು. ರತನ್‌ಗೆ ಈ ಕೌಶಲ್ಯ ಒಲಿದಿರಲಿಲ್ಲ.

ಜಿಮ್ಮಿ ಬಳಿ ಮೊಬೈಲ್ ಫೋನ್ ಇಲ್ಲ ಎನ್ನಲಾಗಿದೆ. ಅವರು ಆಧುನಿಕ ತಂತ್ರಜ್ಞಾನದ ಬದಲು ಪುಸ್ತಕಗಳು ಮತ್ತು ವೃತ್ತಪತ್ರಿಕೆಗಳ ಮೂಲಕ ಸುತ್ತಲಿನ ಆಗುಹೋಗುಗಳನ್ನು ತಿಳಿದುಕೊಳ್ಳುತ್ತಾರೆ. ಅವರು ಮನೆಯಿಂದ ಹೊರ ಬರುವುದು ತುಂಬ ಅಪರೂಪ ಎನ್ನಲಾಗಿದೆ.

ಸರಳ ಜೀವನಶೈಲಿ ಜಿಮ್ಮಿಯವರದಾಗಿದ್ದರೂ ಅವರು ಸಾಕಷ್ಟು ಸಂಪತ್ತಿನ ಒಡೆಯರಾಗಿದ್ದಾರೆ. ಟಾಟಾ ಮೋಟರ್ಸ್,ಟಾಟಾ ಸ್ಟೀಲ್,ಟಾಟಾ ಸನ್ಸ್,ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್),ಟಾಟಾ ಪವರ್,ಇಂಡಿಯನ್ ಹೊಟೆಲ್ಸ್ ಮತ್ತು ಟಾಟಾ ಕೆಮಿಕಲ್ಸ್ ಸೇರಿದಂತೆ ವಿವಿಧ ಟಾಟಾ ಕಂಪನಿಗಳಲ್ಲಿ ಪ್ರಮುಖ ಪಾಲನ್ನು ಹೊಂದಿದ್ದಾರೆ. ಅವರು ಸರ್ ರತನ್ ಟಾಟಾ ಟ್ರಸ್ಟ್‌ನ ಟ್ರಸ್ಟಿಯೂ ಆಗಿದ್ದು, 1989ರಲ್ಲಿ ತಂದೆ ನವಲ್ ಟಾಟಾರ ನಿಧನದ ಬಳಿಕ ಈ ಹುದ್ದೆಯನ್ನು ಆನುವಂಶಿಕವಾಗಿ ಪಡೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News