ಫೋರ್ಡ್‌ನಿಂದ ಅವಮಾನ | ಜಾಗ್ವಾರ್, ಲ್ಯಾಂಡ್ ರೋವರ್ ಖರೀದಿಸಿ ತಿರುಗೇಟು ನೀಡಿದ್ದ ರತನ್ ಟಾಟಾ!

Update: 2024-10-10 15:36 GMT

ರತನ್ ಟಾಟಾ | PC : X

ಮುಂಬೈ : ಧೀಮಂತ ಉದ್ಯಮಿ ರತನ್ ಟಾಟಾ ಫೋರ್ಡ್ ಕಂಪನಿಯಿಂದ ಅವಮಾನಕ್ಕೊಳಗಾದ ಬಳಿಕ ಅದರ ಎರಡು ಐಕಾನಿಕ್ ಬ್ರ್ಯಾಂಡ್‌ಗಳಾದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಖರೀದಿಸಿ, ತಕ್ಕ ತಿರುಗೇಟು ನೀಡಿದ್ದರು.

1998ರಲ್ಲಿ ರತನ್ ತನ್ನ ಕನಸಿನ ಯೋಜನೆಯಾಗಿದ್ದ ಟಾಟಾ ಇಂಡಿಕಾವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದರು. ಅದು ಭಾರತದ ಮೊದಲ ಹ್ಯಾಚ್‌ಬ್ಯಾಕ್ ಆಗಿದ್ದು, ಡೀಸೆಲ್ ಇಂಜಿನ್ ಹೊಂದಿತ್ತು.

ಆದರೆ ಆರಂಭದಲ್ಲಿ ಟಾಟಾ ಇಂಡಿಕಾದ ಮಾರಾಟ ನಿಧಾನವಾಗಿತ್ತು ಮತ್ತು ಟಾಟಾ ಮೋಟರ್ಸ್ ಒಂದು ವರ್ಷದಲ್ಲಿಯೇ ತನ್ನ ಕಾರು ಉದ್ಯಮವನ್ನು ಮಾರಾಟ ಮಾಡಲು ನಿರ್ಧರಿಸಿತ್ತು. ಖರೀದಿಗೆ ಅಮೇರಿಕದ ವಾಹನ ಉದ್ಯಮ ದೈತ್ಯ ಫೋರ್ಡ್ ಕಂಪನಿಯೇ ಸೂಕ್ತ ಎಂದು ನಿರ್ಧರಿಸಿದ್ದ ಟಾಟಾ ಮೋಟರ್ಸ್ ಅದನ್ನು ಮಾತುಕತೆಗೆ ಆಹ್ವಾನಿಸಿತ್ತು.

1999ರಲ್ಲಿ ಬಾಂಬೆ ಹೌಸ್‌ಗೆ ಭೇಟಿ ನೀಡಿದ್ದ ಫೋರ್ಡ್ ತಂಡ ಟಾಟಾ ಇಂಡಿಕಾ ಖರೀದಿಯಲ್ಲಿ ಆಸಕ್ತಿಯನ್ನು ತೋರಿಸಿತ್ತು. ಬಳಿಕ ರತನ್ ಟಾಟಾ ಮಾತುಕತೆಯನ್ನು ಅಂತಿಮಗೊಳಿಸಲು ತನ್ನ ತಂಡದೊಂದಿಗೆ ಡೆಟ್ರಾಯಟ್‌ಗೆ ತೆರಳಿ ಆಗಿನ ಫೋರ್ಡ್ ಅಧ್ಯಕ್ಷ ಬಿಲ್ ಫೋರ್ಡ್‌ರನ್ನು ಭೇಟಿಯಾಗಿದ್ದರು.

ನಿಮಗೆ ಏನೂ ಗೊತ್ತಿಲ್ಲ, ಆದರೂ ನೀವು ಪ್ರಯಾಣಿಕ ಕಾರು ವಿಭಾಗವನ್ನು ಆರಂಭಿಸಿದ್ದು ಏಕೆ ಎಂದು ಪ್ರಶ್ನಿಸಿದ್ದ ಫೋರ್ಡ್ ಅಧಿಕಾರಿಗಳು, ಟಾಟಾ ಮೋಟರ್ಸ್‌ನ ಕಾರು ಉದ್ಯಮವನ್ನು ಖರೀದಿಸುವ ಮೂಲಕ ತಾವು ಅದಕ್ಕೆ ಉಪಕಾರ ಮಾಡುತ್ತಿದ್ದೇವೆ ಎಂಬಂತೆ ಮಾತನಾಡಿದ್ದರು. ಅಲ್ಲಿಗೆ ಮಾತುಕತೆ ಮುರಿದು ಬಿದ್ದಿತ್ತು. ಅದರ ಬೆನ್ನಲ್ಲೇ ರತನ್ ಟಾಟಾ ತನ್ನ ತಂಡದೊಂದಿಗೆ ಭಾರತಕ್ಕೆ ಮರಳಿದ್ದರು. ಈ ಕಹಿ ಅನುಭವ ರತನ್ ಟಾಟಾರನ್ನು ತನ್ನ ಗುರಿಗಳ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸುವಂತೆ ಮಾಡಿತ್ತು.

ಟಾಟಾ ಇಂಡಿಕಾ ಕಾರು ತಯಾರಿಕೆಯನ್ನು ನಿಲ್ಲಿಸದಿರಲು ಅವರು ನಿರ್ಧರಿಸಿದ್ದರು ಮತ್ತು ಬಳಿಕ ಅದ್ಭುತ ಯಶಸ್ಸಿನ ಕಥೆ ತೆರೆದುಕೊಂಡಿತ್ತು.

ಒಂಭತ್ತು ವರ್ಷಗಳ ಬಳಿಕ 2008ರ ಆರ್ಥಿಕ ಹಿಂಜರಿತದ ಬಳಿಕ ಫೋರ್ಡ್ ಕಂಪನಿ ದಿವಾಳಿಯ ಅಂಚನ್ನು ತಲುಪಿತ್ತು. ಇದೇ ವೇಳೆ ಅದರ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ (ಜೆಎಲ್‌ಆರ್) ಖರೀದಿಸುವ ಕೊಡುಗೆಯನ್ನು ರತನ್ ಟಾಟಾ ಮುಂದಿರಿಸಿದ್ದರು.

2.3 ಶತಕೋಟಿ ಡಾಲರ್ ಗಳ ಒಪ್ಪಂದ ಜೂನ್ 2008ರಲ್ಲಿ ಪೂರ್ಣಗೊಂಡಿತ್ತು. ರತನ್‌ಗೆ ಧನ್ಯವಾದಗಳನ್ನು ಸಲ್ಲಿಸಿದ ಫೋರ್ಡ್ ಅಧ್ಯಕ್ಷ ಬಿಲ್ ಫೋರ್ಡ್, ಜೆಎಲ್‌ಆರ್ ಖರೀದಿಸುವ ಮೂಲಕ ನಮಗೆ ದೊಡ್ಡ ಉಪಕಾರ ಮಾಡಿದ್ದೀರಿ ಎಂದು ಹೇಳಿದ್ದರು.

ಇಂದು ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಟಾಟಾ ಮೋಟರ್ಸ್‌ನ ಪ್ರಮುಖ ಆದಾಯ ಮೂಲಗಳಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News