ಸತತ ನಾಲ್ಕನೇ ಬಾರಿ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದ RBI

Update: 2023-10-06 06:32 GMT

ಸಾಂದರ್ಭಿಕ ಚಿತ್ರ (PTI)

ಮುಂಬೈ: ಸತತ ನಾಲ್ಕನೆಯ ಬಾರಿ ತನ್ನ ಬಡ್ಡಿ ದರವಾದ ಶೇ. 6.5 ಅನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಈ ನಿರ್ಧಾರವನ್ನು ಕೇಂದ್ರೀಯ ಬ್ಯಾಂಕ್ ನ ದ್ವೈಮಾಸಿಕ ಆರ್ಥಿಕ ನೀತಿ ಸಮಿತಿಯ ಸಭೆಯಲ್ಲಿ ಸರ್ವಾನುಮತದಿಂದ ಕೈಗೊಳ್ಳಲಾಯಿತು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಇದರ ಅರ್ಥ, ಸಾಲದ ಮೇಲಿನ ಬಡ್ಡಿ ದರಗಳೂ ಯಥಾಸ್ಥಿತಿಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ.

ಸೆಪ್ಟೆಂಬರ್ ತಿಂಗಳಲ್ಲಿ ಹಣದುಬ್ಬರ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದಿರುವ ಶಕ್ತಿಕಾಂತ ದಾಸ್, ಆದರೆ, ಒಟ್ಟಾರೆ ಪರಿಸ್ಥಿತಿಯು ಅನಿಶ‍್ಚಿತತೆಯಿಂದ ಕೂಡಿದೆ ಎಂದೂ ಹೇಳಿದ್ದಾರೆ. ಈ ಆರ್ಥಿಕ ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ. 5.4ರಷ್ಟು ಇರಲಿದ್ದು, ಮುಂದಿನ ವರ್ಷ ಶೇ. 5.2ಕ್ಕೆ ಇಳಿಕೆಯಾಗಲಿದೆ ಎಂದು ದಾಸ್ ತಿಳಿಸಿದ್ದಾರೆ.

ಹೀಗಿದ್ದೂ, ಆಹಾರ ಪದಾರ್ಥಗಳ ಹಣದುಬ್ಬರವು ಹಾಲಿ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ತಗ್ಗುವ ಸಾಧ್ಯತೆ ಕಡಿಮೆ ಎಂದೂ ಅವರು ಹೇಳಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಹಣದುಬ್ಬರ ಪ್ರಮಾಣವು ಶೇ. 6.83ಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಆರ್ಥಿಕ ನೀತಿ ಸಮಿತಿಯ ಸಭೆಯು ಆಯೋಜನೆಗೊಂಡಿತ್ತು. ಹಾಲಿ ತಿಂಗಳಿನ ಹಣದುಬ್ಬರ ಪ್ರಮಾಣದ ದರವು ಮುಂದಿನ ವಾರ ಬಿಡುಗಡೆಯಾಗುವ ಸಾಧ್ಯತೆ ಇದೆ. ಶೇ. 2ರಷ್ಟು ಹೆಚ್ಚುಕಡಿಮೆ ಸಾಧ್ಯತೆಯೊಂದಿಗೆ ಚಿಲ್ಲರೆ ಹಣದುಬ್ಬರದ ಪ್ರಮಾಣವನ್ನು ಶೇ. 4ರ ಆಸುಪಾಸಿನಲ್ಲಿರಿಸಬೇಕು ಎಂದು ಕೇಂದ್ರ ಸರ್ಕಾರವು ಕೇಂದ್ರೀಯ ಬ್ಯಾಂಕ್ ಗೆ ಕಡ್ಡಾಯಗೊಳಿಸಿದೆ.

“ಆರ್ಥಿಕ ನೀತಿಯು ಆಹಾರ ಮತ್ತು ಇಂಧನ ಬೆಲೆಗಳ ದಿಢೀರ್ ಏರಿಕೆಯನ್ನು ಸಂಭಾಳಿಸಲು ಅಕ್ಷರಶಃ ಸನ್ನದ್ಧ ಸ್ಥಿತಿಯಲ್ಲಿರಬೇಕಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಹಾಲಿ ಆರ್ಥಿಕ ವರ್ಷದ ಜಿಡಿಪಿ ಬೆಳವಣಿಗೆಯ ಮುನ್ನೋಟವನ್ನು ಶೇ. 6.5 ಆಗಿಯೇ ಕೇಂದ್ರೀಯ ಬ್ಯಾಂಕ್ ಉಳಿಸಿಕೊಂಡಿದ್ದು, ಭಾರತವು ಜಗತ್ತಿನ ಬೆಳವಣಿಗೆಯ ಯಂತ್ರವಾಗುತ್ತ ಹೆಜ್ಜೆ ಹಾಕುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಪ್ರತಿಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News