ಮೋದಿ-ಅದಾನಿ ಸಂಬಂಧ ಪ್ರಶ್ನಿಸಬಾರದು ಎಂಬ ಕಾರಣಕ್ಕೆ ಉಚ್ಚಾಟನೆಗೆ ಶಿಫಾರಸು :ಮಹುವಾ ಮೊಯಿತ್ರಾ ಆರೋಪ

Update: 2023-11-10 15:17 GMT

Photo- PTI

ಹೊಸದಿಲ್ಲಿ: ತಮ್ಮನ್ನು ಸಂಸತ್ತಿನಿಂದ ಉಚ್ಚಾಟಿಸಬೇಕು ಎಂದು ಲೋಕಸಭಾ ನೈತಿಕ ಸಮಿತಿಯು ನೀಡಿರುವ ವರದಿಯ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅದಾನಿ ಸಮೂಹದ ನಡುವಿನ ಸಂಬಂಧದ ಕೈವಾಡವಿದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ.

ತಾವು ಕಲ್ಲಿದ್ದಲು ಹಗರಣ ಎಂದು ಕರೆದಿರುವ ಹಗರಣವನ್ನು ಬಚ್ಚಿಡಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಅದಾನಿ ಸಮೂಹವು ಪ್ರಯತ್ನಿಸುತ್ತಿದ್ದು, ಇಂತಹ ಆರೋಪಗಳು ಸರ್ಕಾರದ ವರ್ಚಸ್ಸನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಂದಿಸಬಹುದು ಎಂದು ಅವರು ಭಯಭೀತರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮನ್ನು ಸಂಸತ್ತಿನಿಂದ ಉಚ್ಚಾಟಿಸುವ ಯೋಜನೆಯ ಭಾಗವಾಗಿ ಕೇಂದ್ರ ಸರ್ಕಾರವು ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯನ್ನು ಬಳಸಿಕೊಳ್ಳುತ್ತಿದೆ ಎಂದೂ ಅವರು ದೂರಿದ್ದಾರೆ.

PTI ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ, ಗುರುವಾರ ಸಮಿತಿಯು ಅಂಗೀಕರಿಸಿರುವ 500 ಪುಟಗಳ ವರದಿಯಲ್ಲೆಲ್ಲೂ ನಗದಿನ ಪ್ರಸ್ತಾಪವಾಗಿಲ್ಲ ಎಂದು ಮಹುವಾ ಮೊಯಿತ್ರಾ ಪ್ರತಿಪಾದಿಸಿದ್ದಾರೆ. ಮೋದಿ-ಅದಾನಿ ಸಂಬಂಧವು ಪ್ರಶ್ನೆಗೊಳಗಾಗಬಾರದು ಎಂಬ ಕಾರಣಕ್ಕೆ ಸಮಿತಿಯು ನನ್ನ ಉಚ್ಚಾಟನೆಗೆ ಶಿಫಾರಸು ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

“500 ಪುಟಗಳ ವರದಿಯಲ್ಲೆಲ್ಲೂ ನಗದಿನ ಕುರಿತು ಪ್ರಸ್ತಾಪಿಸಲಾಗಿಲ್ಲ. ಯಾಕೆಂದರೆ, ಅಂತಹುದೇನೂ ಇರಲಿಲ್ಲ. ಮೊದಲಿಗೆ, ಎಲ್ಲವೂ ಪ್ರಶ್ನಿಸುವ ಕುರಿತಾದದ್ದಲ್ಲ. ಮೋದಿ-ಅದಾನಿ ಸಂಬಂಧವು ಸರ್ಕಾರವನ್ನು ನಡೆಸುತ್ತಿದ್ದು, ಹೀಗಾಗಿ ಈ ವಿಷಯವು ಹೇಗೆ ಪ್ರಶ‍್ನಿಸಬಾರದು ಎಂಬ ಕುರಿತಾದುದಾಗಿದೆ. ಅವರು ಭಯಗೊಂಡಿದ್ದಾರೆ. ಅದಾನಿ ಕಲ್ಲಿದ್ದಲು ಹಗರಣ ನಡೆಸಿದ್ದರು. ಬೇರಾವುದೇ ದೇಶದಲ್ಲಿ ಈ ಹಗರಣವು ಸರ್ಕಾರವನ್ನು ಪತನಗೊಳಿಸುತ್ತಿತ್ತು. ಈ ವಿಷಯ ಮೋದಿಯ ಹೃದಯಕ್ಕೆ ತಿಳಿದಿದೆ. ಹೀಗಾಗಿ ಅವರಿಗೆ ಈ ಸಂಗತಿಯನ್ನು ಎಷ್ಟು ಕಾಲ ಸಾಧ್ಯವೊ ಅಷ್ಟು ಕಾಲ ಬಚ್ಚಿಡಬೇಕಿದೆ” ಎಂದು ಅವರು ಆರೋಪಿಸಿದ್ದಾರೆ.

“ನಾವು ಕೆಲವರು ಮಾತ್ರ ಈ ವಿಷಯವನ್ನು ಮುನ್ನೆಲೆಗೆ ತರುತ್ತಿದ್ದೇವೆ. ಅವರ ಸಂಪೂರ್ಣ ಯೋಜನೆಯು ನಮ್ಮೆಲ್ಲರ ಬಾಯಿ ಮುಚ್ಚಿಸುವುದಾಗಿದೆ ಮತ್ತು ನಮ್ಮನ್ನು ಜೈಲಿಗೆ ತಳ್ಳುವುದಾಗಿದೆ. ಏನಾದರೂ ಮಾಡಿ ರಾಮಮಂದಿರ ಉದ್ಘಾಟನೆಗೊಳ್ಳುವ ಜನವರಿ 22ರವರೆಗೆ ಎಲ್ಲವನ್ನೂ ಮುಚ್ಚಿ ಹಾಕುವುದು. ಇದಾದ ನಂತರ ಬಿಜೆಪಿ ಮತ್ತೆ ಬಿರುಸಿನ ಸವಾರಿ ಮಾಡಲು ಪ್ರಾರಂಭಿಸುತ್ತದೆ. ಇದು ಅವರ ಯೋಜನೆಯ ಭಾಗವಾಗಿದೆ” ಎಂದೂ ಅವರು ದೂರಿದ್ದಾರೆ.

ಸಂಸತ್ತಿನಿಂದ ಉಚ್ಚಾಟನೆಗೊಳ್ಳುವುದು ನನ್ನ ಪಾಲಿಗೆ ಗೌರವ ಪದಕವಾಗಿದ್ದು, ನೈತಿಕ ಸಮಿತಿಯಿಂದ ಅನೈತಿಕವಾಗಿ ಉಚ್ಚಾಟಿಸಲ್ಪಟ್ಟ ಸಂಸದೆಯಾಗಲಿದ್ದೇನೆ ಎಂದು ಮಹುವಾ ಮೊಯಿತ್ರಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News