ರಾಜಸ್ಥಾನದ ಸಶಸ್ತ್ರ ಪಡೆಗಳ ನೇಮಕಾತಿಯಲ್ಲಿ ಅಗ್ನಿವೀರರಿಗೆ ಮೀಸಲಾತಿ

Update: 2024-07-27 15:40 GMT

ಸಾಂದರ್ಭಿಕ ಚಿತ್ರ | PTI 

ಜೈಪುರ : ರಾಜ್ಯ ಪೊಲೀಸ್ ಹಾಗೂ ಕಾರಾಗೃಹ ಮತ್ತು ಅರಣ್ಯರಕ್ಷಕ ಮತ್ತಿತರ ಪಡೆಗಳ ನೇಮಕಾತಿಗಳಲ್ಲಿ ಅಗ್ನಿವೀರರಿಗೆ ಮೀಸಲಾತಿಯನ್ನು ಒದಗಿಸುವುದಾಗಿ ರಾಜಸ್ಥಾನದ ಬಿಜೆಪಿ ಸರಕಾರವು ಶನಿವಾರ ಘೋಷಿಸಿದೆ. ನಿವೃತ್ತ ಅಗ್ನಿವೀರರನ್ನು ಪೊಲೀಸ್ ಪಡೆಗಳಲ್ಲಿ ನೇಮಕ ಮಾಡುವ ಬಗ್ಗೆ ಹಲವಾರು ರಾಜ್ಯಗಳು ನಿರ್ಧಾರ ಕೈಗೊಂಡ ಬೆನ್ನಲ್ಲೇ ರಾಜಸ್ಥಾನ ಸರಕಾರ ಕೂಡಾ ಈ ಹೆಜ್ಜೆಯನ್ನಿರಿಸಿದೆ.

ಕಾರ್ಗಿಲ್ ಯುದ್ಧದ ಭಾರತದ ವಿಜಯದ 25ನೇ ವರ್ಷಾಚರಣೆಯ ಅಂಗವಾಗಿ ತಾನು ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ತಿಳಿಸಿದ್ದಾರೆ. ಸಮರ್ಪಣಾ ಮನೋಭಾವ ಹಾಗೂ ದೇಶಭಕ್ತಿಯ ಪ್ರಜ್ಞೆಯೊಂದಿಗೆ ರಾಷ್ಟ್ರದ ಗಡಿಗಳನ್ನು ರಕ್ಷಿಸುವ ಅಗ್ನಿವೀರರಿಗೆ ಉದ್ಯೋಗಗಳನ್ನು ಮೀಸಲಿಡಲು ನಿಯಾಮವಳಿಯನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಕಾರ್ಯಾಲಯ ಬಿಡುಗಡೆಗೊಳಿಸಿದ ಹೇಳಿಕೆಯೊಂದು ತಿಳಿಸಿದೆ.

ಪ್ರಧಾನಿ ಮೋದಿಯವರ ಮಾರ್ಗದರ್ಶನದಂತೆ ರಾಜ್ಯ ಸರಕಾರ ಕೈಗೊಂಡ ಈ ನಿರ್ಧಾರವು ದೇಶಕ್ಕೆ ಸೇವೆ ಸಲ್ಲಿಸಿದ ಬಳಿಕ ಅಗ್ನಿವೀರರಿಗೆ ರಾಜ್ಯದಲ್ಲಿ ಕೆಲಸ ಮಾಡುವ ಅವಕಾಶವುನ್ನು ಒದಗಿಸಿಕೊಡಲಿದೆ ಎಂದು ಶರ್ಮಾ ಹೇಳಿದರು.ಸೇನಾಪಡೆಗಳಲ್ಲಿ ಕರ್ತವ್ಯ ನಿರ್ವಹಿಸಿ ಹಿಂತಿರುಗುವ ಅಗ್ನಿವೀರರಿಗೆ ರಾಜ್ಯದ ಪಡೆಗಳಲ್ಲಿ ನೀಡುವ ಮೀಸಲಾತಿಯ ಪ್ರಮಾಣವನ್ನು ಇನ್ನಷ್ಟೇ ನಿರ್ಧರಿಸಬೇಕಾಗಿದೆಯೆಂದು ಶರ್ಮಾ ತಿಳಿಸಿದರು.

ಕೇಂದೀಯ ಸಶಸ್ತ್ರಪಜೆಗಳು ಹಾಗೂ ಅರೆಸೈನಿಕ ಪಡೆಗಳಲ್ಲಿ ಶೇ.10ರಷ್ಟು ಉದ್ಯೋಗಗಳನ್ನು ಅಗ್ನಿವೀರರಿಗೆ ಮೀಸಲಿಡಲು ಕೇಂದ್ರ ಸರಕಾರವು ಈ ತಿಂಗಳ ಆರಂಭದಲ್ಲಿ ನಿರ್ಧರಿಸಿತ್ತು. ಬಿಜೆಪಿ ಆಳ್ವಿಕೆಯ ರಾಜ್ಯಗಳಾದ ಗುಜರಾತ್, ಒಡಿಶಾ, ಉತ್ತರಪ್ರದೇಶ, ಚತ್ತೀಸ್‌ಗಡ, ಮಧ್ಯಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳು ಕೂಡಾ ತಮ್ಮ ಪಡೆಗಳಲ್ಲಿ ಅಗ್ನಿವೀರರ ನೇಮಕಾತಿಯ ನಿರ್ಧಾರವನ್ನು ಜುಲೈ 26ರಂದು ಕೈಗೊಂಡಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News