ನ.25ರಿಂದ ಡಿ.20 ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಹೊಸದಿಲ್ಲಿ : ಸಂಸತ್ತಿನ ಚಳಿಗಾಲದ ಅಧಿವೇಶನವು ನ.25ರಿಂದ ಡಿ.20ರವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಅವರು ಮಂಗಳವಾರ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿವರಗಳನ್ನು ಹಂಚಿಕೊಂಡಿರುವ ಅವರು, ನ.26 ಸಂವಿಧಾನ ದಿನವಾಗಿದ್ದು, ಭಾರತದ ಸಂವಿಧಾನವನ್ನು ಅಂಗೀಕರಿಸಿ 75 ವರ್ಷಗಳು ಪೂರ್ಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಅಂದು ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದು ಜಮ್ಮು-ಕಾಶ್ಮೀರ,ಹರ್ಯಾಣ,ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ಬಳಿಕ ಸಂಸತ್ತಿನ ಮೊದಲ ಅಧಿವೇಶನವಾಗಲಿದೆ. ಜಮ್ಮು-ಕಾಶ್ಮೀರ ಮತ್ತು ಹರ್ಯಾಣಗಳಲ್ಲಿ ಚುನಾವಣಾ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, ಮಹಾರಾಷ್ಟ್ರ ಮತ್ತು ಜಾರ್ಖಂಡ್ನಲ್ಲಿ ನ.23ರೊಳಗೆ ಪೂರ್ಣಗೊಳ್ಳಲಿದೆ.
ಅಧಿವೇಶನದಲ್ಲಿ ಮಂಡನೆ ಅಥವಾ ಚರ್ಚೆಯಾಗಲಿರುವ ಸಾಧ್ಯತೆಯಿರುವ ಪ್ರಮುಖ ಮಸೂದೆಗಳಲ್ಲಿ ವಿವಾದಾತ್ಮಕ ವಕ್ಫ್ ತಿದ್ದುಪಡಿಗಳು ಮತ್ತು ಸರಕಾರದ ಮಹತ್ವಾಕಾಂಕ್ಷೆಯ ‘ಒಂದು ದೇಶ ಒಂದು ಚುನಾವಣೆ’ ಸೇರಿವೆ.
ವಕ್ಫ್ ಮಸೂದೆಗೆ ತಿದ್ದುಪಡಿಗಳನ್ನು ಪ್ರಸ್ತುತ ಬಿಜೆಪಿ ಸಂಸದ ಜಗದಂಬಿಕಾ ಪಾಲ್ ನೇತೃತ್ವದ ಜಂಟಿ ಸಂಸದೀಯ ಸಮಿತಿಯು ಪರಿಶೀಲಿಸುತ್ತಿದ್ದು, ನ.29ರೊಳಗೆ ತನ್ನ ವರದಿಯನ್ನು ಸಂಸತ್ತಿಗೆ ಸಲ್ಲಿಸುವ ನಿರೀಕ್ಷೆಯಿದೆ.
ಆದರೆ,ತಾವು ಸಮಿತಿಯಿಂದ ದೂರವಿರಬಹುದು ಎಂದು ಪ್ರತಿಪಕ್ಷ ಸಂಸದರು ಈ ವಾರ ಲೋಕಸಭಾ ಸ್ಪೀಕರ್ ಗೆ ಪತ್ರಮುಖೇನ ಎಚ್ಚರಿಕೆಯನ್ನು ನೀಡಿದ್ದು,ಇದರೊಂದಿಗೆ ಜಂಟಿ ಸಂಸದೀಯ ಸಮಿತಿಯ ಕಾರ್ಯ ನಿರ್ವಹಣೆ ವಿವಾದದಲ್ಲಿ ಸಿಲುಕಿದೆ. ಸಭೆಯ ದಿನಾಂಕಗಳು ಮತ್ತು ಸಮಾಲೋಚನೆಗಳಿಗಾಗಿ ಸಮನ್ಸ್ಗೆ ಸಂಬಂಧಿಸಿದಂತೆ ಪಾಲ್ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಸಂಸದರು,ಇದು ಪ್ರತಿಭಟನೆಯನ್ನು ಶಮನಿಸಲು ಮತ್ತು ಬದಲಾವಣೆಗಳನ್ನು ಅಂಗೀಕರಿಸಲು ಅವರ ಬಲವಂತದ ಕ್ರಮವಾಗಿದೆ ಎಂದು ಬಣ್ಣಿಸಿದ್ದಾರೆ.
‘ಒಂದು ದೇಶ ಒಂದು ಚುನಾವಣೆ’ ಪ್ರಸ್ತಾವಕ್ಕೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯು ಕಳೆದ ತಿಂಗಳು ಹಸಿರು ನಿಶಾನೆಯನ್ನು ತೋರಿಸಿದೆ. ಪ್ರತಿಪಕ್ಷಗಳು ಈ ಪ್ರಸ್ತಾವಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿವೆ.