ಉವೈಸಿ ನಾಲಗೆ ಕತ್ತರಿಸುವವರಿಗೆ ಬಹುಮಾನ : ಮಹಾರಾಷ್ಟ್ರ ಬಿಜೆಪಿ ಶಾಸಕನ ಘೋಷಣೆ

Update: 2024-06-28 13:23 GMT

ನಿತೇಶ್ ರಾಣೆ  |  PhotoScreengrab : X \ @HateDetectors

ಮುಂಬೈ : ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ನಾಲಗೆ ಕತ್ತರಿಸುವವರಿಗೆ ಬಹುಮಾನ ನೀಡಲಾಗುವುದು ಎಂದು ಮಹಾರಾಷ್ಟ್ರದ ಬಿಜೆಪಿ ಶಾಸಕ ನಿತೇಶ್ ರಾಣೆ ಘೋಷಿಸಿದ್ದಾರೆ.

ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಅಸದುದ್ದೀನ್ ಉವೈಸಿ 'ಜೈ ಫೆಲೆಸ್ತೀನ್' ಎಂದು ಘೋಷಣೆ ಕೂಗಿದ್ದಕ್ಕೆ ಪ್ರತಿಯಾಗಿ ಅವರು ಈ ಹೇಳಿಕೆ ನೀಡಿದ್ದಾರೆ.

"ಅಸದುದ್ದೀನ್ ಉವೈಸಿ ನಾಲಗೆಯನ್ನು ಕತ್ತರಿಸಿ ಹಾಗೂ ನನ್ನ ಬಳಿಗೆ ತನ್ನಿ. ನಾನು ನಿಮಗೆ ಬಹುಮಾನ ನೀಡುತ್ತೇನೆ. 'ಜೈ ಫೆಲೆಸ್ತೀನ್' ಎಂದು ಘೋಷಣೆ ಕೂಗಿ ಉವೈಸಿ ಹೇಗೆ ಮುಕ್ತವಾಗಿ ತಿರುಗಾಡಿಕೊಂಡಿರಲು ಸಾಧ್ಯ? ಇಂತಹ ಕೆಲಸ ಮಾಡಿದ ವ್ಯಕ್ತಿಯನ್ನು ಯಾವ ದೇಶವೂ ಜೀವಂತವಾಗಿ ಉಳಿಸುತ್ತಿರಲಿಲ್ಲ" ಎಂದು ಅವರು ಕಿಡಿ ಕಾರಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ನಿತೇಶ್ ರಾಣೆ, "ಪಾಕಿಸ್ತಾನ ಸಂಸತ್ತಿನಲ್ಲಿ ಯಾರಾದರೂ 'ಜೈ ಶ್ರೀರಾಮ್', 'ವಂದೇ ಮಾತರಂ' ಘೋಷಣೆಗಳನ್ನು ಕೂಗಿದ್ದರೆ, ಅವರು ಅಲ್ಲಿಂದ ಜೀವಂತವಾಗಿ ಹೊರ ಬರಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನಾವು ಪೂಜಿಸುವ ಸಂಸತ್ತಿನಲ್ಲಿ, ನಾವು ನಿಷ್ಠವಾಗಿರುವ ದೇಶದಲ್ಲಿ ಹಾಗೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನದ ಮೇಲೆ ನಡೆಯುತ್ತಿರುವ ದೇಶದಲ್ಲಿ ನಾವು ಶತ್ರು ದೇಶಗಳು ಅಥವಾ ಭಯೋತ್ಪಾದಕರ ಪರವಾದ ಧ್ವನಿಗಳನ್ನು ಕೇಳುತ್ತಿದ್ದೇವೆ. ಸಂಸತ್ತಿನಲ್ಲಿ ಇಂತಹ ಘೋಷಣೆಗಳನ್ನು ಕೂಗುವವರನ್ನು ಎರಡು ಕಾಲಿನ ಮೇಲೆ ಹೊರ ಬರಲು ಬಿಡಬಾರದು. ಪಾಕಿಸ್ತಾನೀಯರು ಅಥವಾ ಚೀನೀಯರು ತಮ್ಮ ಸಂಸತ್ತಿನಲ್ಲಿ ಇಂತಹುದು ಆಗಲು ಅವಕಾಶ ನೀಡುತ್ತಿರಲಿಲ್ಲ" ಎಂದು ವಾಗ್ದಾಳಿ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News