ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಹಣಕಾಸು ಅವ್ಯವಹಾರ ಆರೋಪ | ಹಲವು ಸ್ಥಳಗಳಲ್ಲಿ ಈಡಿ ಶೋಧ ಕಾರ್ಯಾಚರಣೆ

Update: 2024-09-12 15:30 GMT

   ಸಾಂದರ್ಭಿಕ ಚಿತ್ರ |  PC : PTI 

ಕೋಲ್ಕತಾ : ಇಲ್ಲಿನ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಹಣಕಾಸು ಅವ್ಯವಹಾರ ಆರೋಪಕ್ಕೆ ಸಂಬಂಧಿಸಿ ಕೋಲ್ಕತ್ತಾ ಹಾಗೂ ಅದರ ಸುತ್ತಮತ್ತಲ ಪ್ರದೇಶಗಳ ಕನಿಷ್ಠ 3 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ(ಈಡಿ) (ಈಡಿ) ಗುರುವಾರ ಬೆಳಗ್ಗೆ ಶೋಧ ಕಾರ್ಯಾಚರಣೆ ನಡೆಸಿದೆ.

ಉತ್ತರ ಕೋಲ್ಕತ್ತಾದ ಟಾಲಾ, ಉತ್ತರ 24 ಪರಗಣಗಳ ಚಿನ್ನಾರ್ ಪಾರ್ಕ್ ಹಾಗೂ ಕಾಲಿಂದಿಯಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವ ಅಧಿಕಾರಿಗಳು ತಿಳಿಸಿದ್ದಾರೆ. ‘‘ಶೋಧ ಕಾರ್ಯಾಚರಣೆಗೆ ಗುರುವಾರ ಬೆಳಗ್ಗೆ ಆರಂಭವಾಗಿತ್ತು’’ ಎಂದು ಅವರು ಹೇಳಿದ್ದಾರೆ.

ಜಾರಿ ನಿರ್ದೇಶನಾಲಯ(ಈಡಿ)ದ ಅಧಿಕಾರಿಗಳು ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ. ಸಂದೀಪ್ ಘೋಷ್ ಅವರ ಚಿನ್ನಾರ್ ಪಾರ್ಕ್‌ನಲ್ಲಿರುವ ಪೂರ್ವಜರ ನಿವಾಸಕ್ಕೆ ತಲುಪಿದ್ದಾರೆ. ಇನ್ನೊಂದು ತಂಡ ಡಾ. ಸಂದೀಪ್ ಘೋಷ್ ಅವರೊಂದಿಗೆ ಆಪ್ತ ನಂಟು ಹೊಂದಿರುವ ಚಂದನ್ ಲೋಹಾ ಅವರ ಟಾಲಾದಲ್ಲಿರುವ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಅವರು ಹೇಳಿದ್ದಾರೆ.

ಹಣಕಾಸು ಅವ್ಯವಹಾರದ ಆರೋಪದ ಬಗ್ಗೆ ಕೂಡ ತನಿಖೆ ನಡೆಸುತ್ತಿರುವ ಸಿಬಿಐ ಈ ಹಿಂದೆ ಆಗಸ್ಟ್ 25ರಂದು ಚಂದನ್ ಲೋಹಾರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಈಗ ಸಿಬಿಐಯ ಮೂರನೇ ತಂಡ ಕಾಳಿಂದಿಯಲ್ಲಿರುವ ವೈದ್ಯಕೀಯ ಸಲಕರಣೆಗಳ ಪೂರೈಕೆಯ ಕಚೇರಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ ಎಂದಿದ್ದಾರೆ.

ಆರ್‌ಜಿ ಕರ್‌ನಲ್ಲಿ ಹಣ ಅಕ್ರಮ ವರ್ಗಾವಣೆ ಆರೋಪದ ಕುರಿತಂತೆ ತನ್ನ ತನಿಖೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಈಡಿ) ಕಳೆದ ಒಂದು ವಾರದಲ್ಲಿ ನಡೆಸುತ್ತಿರುವ ಎರಡನೇ ದಾಳಿ ಇದಾಗಿದೆ. ಜಾರಿ ನಿರ್ದೇಶನಾಲಯ(ಈಡಿ) ಸೆಪ್ಟಂಬರ್ 6ರಂದು ಕನಿಷ್ಠ 10 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.

ಸಂದೀಪ್ ಘೋಷ್ ಅವರು 2021 ಹಾಗೂ 2024ರ ನಡುವೆ ಪ್ರಾಂಶುಪಾಲರಾಗಿದ್ದ 3 ವರ್ಷಗಳ ಅವಧಿಯಲ್ಲಿ ಆರ್‌ಜಿ ಕರ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆದ ಹಣಕಾಸು ಅವ್ಯವಹಾರಗಳ ಆರೋಪದ ಕುರಿತು ತನಿಖೆ ನಡೆಸುವಂತೆ ಕಲ್ಕತ್ತಾ ಉಚ್ಚ ನ್ಯಾಯಾಲಯ ಆಗಸ್ಟ್ 23ರಂದು ಸಿಬಿಐಗೆ ಆದೇಶ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News