ಮಣಿಪುರದಲ್ಲಿ ನಾಯಕತ್ವ ಬದಲಾವಣೆ ವದಂತಿ: ದೆಹಲಿಯಲ್ಲಿ ಬೀಡುಬಿಟ್ಟ ಶಾಸಕರು

Update: 2024-06-29 04:34 GMT

ಮಣಿಪುರ ಮುಖ್ಯಮಂತ್ರಿ ಬೀರೇನ್ ಸಿಂಗ್ PC: PTI

ಇಂಫಾಲ: ಜನಾಂಗೀಯ ಹಿಂಸಾಚಾರದಿಂದ ಜರ್ಜರಿತವಾಗಿರುವ ಮಣಿಪುರದಲ್ಲಿ ನಾಯಕತ್ವ ಬದಲಾವಣೆಯ ವದಂತಿ ದಟ್ಟವಾಗಿ ಹಬ್ಬಿದೆ. ತಮ್ಮ ಪಕ್ಷದ ಹಾಗೂ ಮಿತ್ರಪಕ್ಷಗಳ ಕೆಲ ಸದಸ್ಯರು ದೆಹಲಿಗೆ ತೆರಳಿದ್ದಾರೆ ಎನ್ನುವುದನ್ನು ಮುಖ್ಯಮಂತ್ರಿ ಬೀರೇನ್ ಸಿಂಗ್ ಸ್ವತಃ ಒಪ್ಪಿಕೊಂಡಿದ್ದಾರೆ. ಆದರೆ ಅವರ ದೆಹಲಿ ಭೇಟಿ ತಮ್ಮ ರಾಜೀನಾಮೆಗೆ ಆಗ್ರಹಿಸುವ ಸಲುವಾಗಿ ಎಂಬ ವದಂತಿಗಳನ್ನು ಅವರು ತಳ್ಳಿಹಾಕಿದ್ದಾರೆ.

ಕಳೆದ ಕೆಲ ದಿನಗಳಿಂದ ಬಿಜೆಪಿ ಹಾಗೂ ಮಿತ್ರಪಕ್ಷಗಳಾದ ನಾಗಾ ಪೀಪಲ್ಸ್ ಫ್ರಂಟ್ (ಎನ್ ಪಿಎಫ್), ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ ಪಿಪಿ) ಮತ್ತು ಜೆಡಿಯು ಪಕ್ಷಗಳಿಗೆ ಸೇರಿದ ಕೆಲ ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಮುಖ್ಯಮಂತ್ರಿ ಪದತ್ಯಾಗಕ್ಕೆ ಒತ್ತಡ ತರುತ್ತಿದ್ದಾರೆ ಎಂದು ವರದಿಯಾಗಿದೆ.

ಬೀರೇನ್ ಸಿಂಗ್ 2017ರಲ್ಲಿ ಮುಖ್ಯಮಂತ್ರಿ ಆದಾಗಿನಿಂದಲೂ ಅವರ ಬದಲಾವಣೆಗೆ ಬಿಜೆಪಿ ನಾಯಕತ್ವದ ಮೇಳೆ ಒತ್ತಡ ನಿರಂತರವಾಗಿ ಇದೆ. ಕಳೆದ ವರ್ಷದ ಮೇ 31ರಂದು ರಾಜ್ಯದಲ್ಲಿ ಜನಾಂಗೀಯ ಸಂಘರ್ಷ ಭುಗಿಲೆದ್ದ ಬಳಿಕ ಇದು ಮತ್ತಷ್ಟು ಹೆಚ್ಚಿದರೂ, ಇದುವರೆಗೆ ಫಲ ನೀಡಿಲ್ಲ. ಇದರ ಪರಿಣಾಮವಾಗಿ ಮಣಿಪುರದ ಎರಡೂ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಳ್ಳಬೇಕಾಯಿತು. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಈ ಎರಡೂ ಕ್ಷೇತ್ರಗಳಲ್ಲಿ ಗೆದ್ದಿತ್ತು.

60 ಸದಸ್ಯಬಲದ ವಿಧಾನಸಭೆಯಲ್ಲಿ ಎನ್ ಡಿಎ 57 ಶಾಸಕರನ್ನು ಹೊಂದಿದ್ದು, ಬಿಜೆಪಿ ಸ್ವತಃ 37 ಶಾಸಕರನ್ನು ಹೊಂದಿದೆ. ಗುರುವಾರ ರಾತ್ರಿ ಮಿತ್ರಪಕ್ಷಗಳ ಜತೆ ಸಭೆ ನಡೆಸಿದ ಬೀರೇನ್ಸಿಂಗ್, ಮಣಿಪುರದಲ್ಲಿ ಶಾಶ್ವತ ಶಾಂತಿ ನೆಲೆಸುವಂತಾಗಲು ಕ್ರಮ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಶುಕ್ರವಾಋ ಪ್ರಕಟಿಸಿದ್ದಾರೆ.

"ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಅವರ ಜತೆ ಮಾತುಕತೆ ನಡೆಸುವ ಸಲುವಾಗಿ ದೆಹಲಿಗೆ ತೆರಳುವ ಬಗ್ಗೆ ನಿರ್ಧರಿಸಿದ್ದೇವೆ. ಭೇಟಿಗೆ ಸಮಯ ನಿಗದಿಪಡಿಸಲು ಶಾಸಕರು ನನಗೆ ಹೊಣೆ ವಹಿಸಿದ್ದಾರೆ. ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಏಕೆ ತೊಂದರೆ ಕೊಡಬೇಕು ಎಂದು ನಾನು ಯೋಚಿಸಿದೆ. ಸಭೆ ನಡೆಯುವ ದಿನ ನಾನೂ ತೆರಳುತ್ತೇನೆ. ಆದರೆ ಕೆಲ ಶಾಸಕರು ಮುಂಚಿತವಾಗಿಯೇ ಹೋಗಿದ್ದಾರೆ. ರಾಜೀನಾಮೆಗೂ ಇದಕ್ಕೂ ಸಂಬಂಧ ಇಲ್ಲ. ನಿನ್ನೆ ನಡೆದ ಸಭೆಯಲ್ಲಿ 35 ಶಾಸಕರು ಭಾಗವಹಿಸಿ, ಮನವಿಪತ್ರಕ್ಕೆ ಸಹಿ ಹಾಕಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News