ಯುದ್ಧ ಮಾಡುವಂತೆ ರಷ್ಯಾ ಬಲವಂತಪಡಿಸುತ್ತಿದೆ: ಅಳಲು ತೋಡಿಕೊಂಡ ಏಳು ಭಾರತೀಯರು

Update: 2024-03-06 10:38 GMT

Photo: Twitter/Screengrab 

ಮಾಸ್ಕೊ: ರಷ್ಯಾ ಸೇನೆಯ ನೆರವು ಸಿಬ್ಬಂದಿಗಳಾಗಿ ದುಡಿಯುತ್ತಿರುವ 20 ಮಂದಿ ಭಾರತೀಯರನ್ನು ಬಿಡುಗಡೆಗೊಳಿಸಲು ಭಾರತವು ತನ್ನ ಕೈಲಾದ ಪ್ರಯತ್ನ ನಡೆಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿದ ಬೆನ್ನಿಗೇ, ವಿಡಿಯೊವೊಂದನ್ನು ಬಿಡುಗಡೆ ಮಾಡಿರುವ ಏಳು ಮಂದಿ ಭಾರತೀಯರು, ರಷ್ಯಾವು ಉಕ್ರೇನ್ ವಿರುದ್ಧ ಯುದ್ಧ ಮಾಡುವಂತೆ ನಮ್ಮನ್ನು ಬಲವಂತಪಡಿಸುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಸದ್ಯ ವೈರಲ್ ಆಗಿರುವ ವಿಡಿಯೊದಲ್ಲಿ, ಕೋಣೆಯೊಂದರಲ್ಲಿರುವ ಏಳು ಮಂದಿ ಸೇನಾ ಸಮವಸ್ತ್ರದಲ್ಲಿರುವುದನ್ನು ನೋಡಬಹುದಾಗಿದೆ. ಕೋಣೆಯೊಂದರಲ್ಲಿ ಚಿತ್ರೀಕರಿಸಲಾಗಿರುವ ಈ ವಿಡಿಯೊದಲ್ಲಿ ಆರು ಮಂದಿ ಭಾರತೀಯರು ಒಂದು ಮೂಲೆಯಲ್ಲಿ ನಿಂತುಕೊಂಡಿದ್ದರೆ, ಮತ್ತೊಬ್ಬ ಭಾರತೀಯ ತಮ್ಮ ಪರಿಸ್ಥಿತಿಯನ್ನು ವಿವರಿಸುತ್ತಿರುವುದನ್ನು ಕಾಣಬಹುದಾಗಿದೆ.

"ನಾವು ಡಿಸೆಂಬರ್ 27ರಂದು ರಷ್ಯಾ ನೋಡಲು ಪ್ರವಾಸಿಗಳಾಗಿ ಬಂದಿದ್ದೆವು ಹಾಗೂ ನಮ್ಮನ್ನು ಭೇಟಿಯಾದ ಏಜೆಂಟ್ ಒಬ್ಬ, ನಾವು ವಿವಿಧ ಸ್ಥಳಗಳಿಗೆ ಭೇಟಿ ನೀಡಲು ನೆರವು ನೀಡಿದ. ಆತ ನಮ್ಮನ್ನು ಬೆಲಾರಸ್‌ಗೆ ಕರೆದೊಯ್ಯುವುದಾಗಿ ತಿಳಿಸಿದೆ. ಆದರೆ, ಆ ದೇಶಕ್ಕೆ ತೆರಳಲು ವೀಸಾದ ಅಗತ್ಯವಿದೆ ಎಂಬ ಸಂಗತಿ ನಮಗೆ ತಿಳಿದಿರಲಿಲ್ಲ. ನಾವು ಬೆಲಾರಸ್‌ಗೆ ತೆರಳಿದ ನಂತರ ಆತನಿಗೆ ದುಡ್ಡು ನೀಡಿದೆವಾದರೂ, ಆತ ನಮ್ಮಿಂದ ಹೆಚ್ಚು ದುಡ್ಡಿಗಾಗಿ ಬೇಡಿಕೆ ಇಟ್ಟ. ಆತನಿಗೆ ನೀಡಲು ನಮ್ಮ ಬಳಿ ದುಡ್ಡಿಲ್ಲದೆ ಇದ್ದುದರಿಂದ ಆತ ನಮ್ಮನ್ನು ದಾರಿ ಮಧ್ಯದಲ್ಲೇ ಏಕಾಂಗಿಯಾಗಿ ಬಿಟ್ಟು ತೆರಳಿದ" ಎಂದು ಓರ್ವ ಭಾರತೀಯ ಹೇಳುತ್ತಿರುವುದನ್ನು ಆ ವಿಡಿಯೊದಲ್ಲಿ ಕೇಳಬಹುದಾಗಿದೆ.

ಕಳೆದ ವಾರ, ರಷ್ಯಾ ಸೇನೆಗೆ ನೆರವು ಸಿಬ್ಬಂದಿಗಳಾದ ಕಾರ್ಯನಿರ್ವಹಿಸುತ್ತಿರುವ ಸುಮಾರು 20 ಮಂದಿ ಭಾರತೀಯರು ನೆರವಿಗಾಗಿ ಭಾರತೀಯ ಪ್ರಾಧಿಕಾರಗಳನ್ನು ಸಂಪರ್ಕಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಮ್ಮ ದೈನಂದಿನ 20 ನಿಮಿಷಗಳ ವಿವರಣೆಯಲ್ಲಿ ತಿಳಿಸಿದ್ದರು.

ಭಾರತೀಯರು ರಷ್ಯಾದ ವಿವಿಧ ಪ್ರದೇಶಗಳಲ್ಲಿದ್ದು, ಅವರನ್ನು ಅಲ್ಲಿಂದ ಕರೆ ತರಲು ರಷ್ಯಾ ಪ್ರಾಧಿಕಾರಗಳೊಂದಿಗೆ ಭಾರತೀಯ ರಾಜತಾಂತ್ರಿಕ ಕಚೇರಿಯು ಸಂಪರ್ಕದಲ್ಲಿದೆ ಎಂದೂ ಅವರು ಹೇಳಿದ್ದರು. ಇದರ ಬೆನ್ನಿಗೇ ಏಳು ಮಂದಿ ಭಾರತೀಯರು ನೆರವಿಗಾಗಿ ಬೇಡಿಕೆ ಇಟ್ಟಿರುವ ವಿಡಿಯೊ ವೈರಲ್ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News