ಚೀನಾ ವಿದೇಶಾಂಗ ಸಚಿವರ ಜೊತೆ ಎಸ್.ಜೈಶಂಕರ ಭೇಟಿ | ಗಡಿ ಬಿಕ್ಕಟ್ಟಿಗೆ ಶೀಘ್ರ ಪರಿಹಾರ ಕುರಿತು ಚರ್ಚೆ

Update: 2024-07-26 15:39 GMT

ಎಸ್.ಜೈಶಂಕರ್ , ವಾಂಗ್ ಯಿ |  PC : PTI 

ಹೊಸದಿಲ್ಲಿ : ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾಗಿ,ದ್ವಿಪಕ್ಷೀಯ ಸಂಬಂಧಗಳನ್ನು ಸ್ಥಿರಗೊಳಿಸಲು ಮತ್ತು ಪುನರ್ನಿರ್ಮಿಸಲು ಪೂರ್ವ ಲಡಾಖ್ನಲ್ಲಿಯ ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ)ಯುದ್ದಕ್ಕೂ ಉಳಿದಿರುವ ಸ್ಥಳಗಳಲ್ಲಿ ಮಿಲಿಟರಿ ಬಿಕ್ಕಟ್ಟನ್ನು ಶೀಘ್ರ ಬಗೆಹರಿಸುವ ಕುರಿತು ಚರ್ಚಿಸಿದರು.

ಗುರುವಾರ ಲಾವೋಸ್ನ ವಿಯೆಂಟಿಯಾನ್ನಲ್ಲಿ ಆಗ್ನೇಯ ಏಶ್ಯಾ ರಾಷ್ಟ್ರಗಳ ಒಕ್ಕೂಟಕ್ಕೆ ಸಂಬಂಧಿಸಿದ ವಿದೇಶಾಂಗ ಸಚಿವರ ಸಭೆಯ ನೇಪಥ್ಯದಲ್ಲಿ ಉಭಯ ನಾಯಕರು ಭೇಟಿಯಾಗಿದ್ದರು. ಇದು ಜುಲೈ ತಿಂಗಳಿನಲ್ಲಿ ಅವರ ಎರಡನೇ ಭೇಟಿಯಾಗಿದೆ. ಜು.4ರಂದು ಕಜಕಿಸ್ತಾನದ ರಾಜಧಾನಿ ಅಸ್ತಾನಾದಲ್ಲಿ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯ ನೇಪಥ್ಯದಲ್ಲಿ ಉಭಯ ನಾಯಕರು ಪರಸ್ಪರ ಭೇಟಿಯಾಗಿದ್ದರು.

ಗುರುವಾರದ ಭೇಟಿಯು ಜು.4ರ ಮಾತುಕತೆಗಳ ನಂತರ ಪರಿಸ್ಥಿತಿಯನ್ನು ಪುನರ್ಪರಿಶೀಲಿಸಲು ಅವಕಾಶವನ್ನು ಉಭಯ ಸಚಿವರಿಗೆ ಒದಗಿಸಿತ್ತು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಗುರುವಾರದ ಮಾತುಕತೆಗಳ ಸಂದರ್ಭ ಒಂದು ಉದ್ದೇಶದೊಂದಿಗೆ ಕೆಲಸ ಮಾಡುವ ಅಗತ್ಯವನ್ನು ಮತ್ತು ಸಂಪೂರ್ಣ ನಿಸ್ಸೇನಿಕರಣವನ್ನು ಆದಷ್ಟು ಬೇಗ ಪೂರ್ಣಗೊಳಿಸುವ ತುರ್ತನ್ನು ಎರಡೂ ದೇಶಗಳು ಒಪ್ಪಿಕೊಂಡಿವೆ. ದ್ವಿಪಕ್ಷೀಯ ಸಂಬಂಧಗಳನ್ನು ಸಾಮಾನ್ಯಗೊಳಿಸಲು ಗಡಿಗಳಲ್ಲಿ ಶಾಂತಿ ಮತ್ತು ನೆಮ್ಮದಿ ಹಾಗೂ ಎಲ್ಎಸಿಗೆ ಗೌರವ ಅತ್ಯಗತ್ಯವಾಗಿವೆ. ಈ ಹಿಂದಿನ ಸಂಬಂಧಿತ ದ್ವಿಪಕ್ಷೀಯ ಒಪ್ಪಂದಗಳು,ಶಿಷ್ಟಾಚಾರಗಳು ಮತ್ತು ಎರಡೂ ಸರಕಾರಗಳ ನಡುವೆ ಮೂಡಿದ್ದ ತಿಳುವಳಿಕೆಗೆ ಉಭಯ ದೇಶಗಳು ಸಂಪೂರ್ಣವಾಗಿ ಬದ್ಧವಾಗಿರಬೇಕಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಗಾಲ್ವಾನ್ ಘರ್ಷಣೆಗಳ ಬಳಿಕ ಗಡಿ ಬಿಕ್ಕಟ್ಟನ್ನು ಪರಿಹರಿಸಲು ಭಾರತ ಮತ್ತು ಚೀನಾ ಹಲವಾರು ಸುತ್ತುಗಳ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಿವೆ. ಇತ್ತೀಚಿನ ಮಾತುಕತೆಗಳು ಫೆಬ್ರವರಿಯಲ್ಲಿ ನಡೆದಿದ್ದು,ಎಲ್ಎಸಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳಲು ಉಭಯ ದೇಶಗಳು ಒಪ್ಪಿಕೊಂಡಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News