ಬಿಜೆಪಿ ಒತ್ತಡಕ್ಕೆ ಮಣಿಯದ ಅರುಣ್ ಗೋಯಲ್ ಗೆ ವಂದನೆಗಳು : ಮಮತಾ ಬ್ಯಾನರ್ಜಿ

Update: 2024-03-10 13:03 GMT

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Photo: PTI)

ಕೋಲ್ಕತಾ: ಬಿಜೆಪಿಯ ಒತ್ತಡಕ್ಕೆ ಮಣಿಯದಿರುವ ಅರುಣ್ ಗೋಯಲ್ ಅವರನ್ನು ಅಭಿನಂದಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಾಳಯವನ್ನು ಪರಾಭವಗೊಳಿಸಲಾಗುವುದು ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಆಯುಕ್ತ ಅರುಣ್ ಗೋಯಲ್ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ ಒಂದು ದಿನದ ಬಳಿಕ, ಇಲ್ಲಿನ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಅರುಣ್ ಗೋಯಲ್ ಅವರ ದಿಢೀರ್ ರಾಜಿನಾಮೆಯು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಮತವನ್ನು ಲೂಟಿ ಮಾಡುವ ಪ್ರಯತ್ನ ನಡೆಸುತ್ತಿದೆ ಎಂಬುದನ್ನು ಸಾಬೀತು ಪಡಿಸಿದೆ ಎಂದು ಆರೋಪಿಸಿದ್ದಾರೆ.

“ಪಶ್ಚಿಮ ಬಂಗಾಳದ ಲೋಕಸಭಾ ಚುನಾವಣೆ ಹಾಗೂ ರಕ್ಷಣಾ ಪಡೆಗಳನ್ನು ನಿಯೋಜಿಸುವ ಸಂಬಂಧ ಬಿಜೆಪಿಯ ದಿಲ್ಲಿ ನಾಯಕರು ಹಾಗೂ ತಮ್ಮ ಮೇಲಧಿಕಾರಿಗಳ ಒತ್ತಡಕ್ಕೆ ಮಣಿಯದ ಅರುಣ್ ಗೋಯಲ್ ಅವರಿಗೆ ನಾನು ವಂದಿಸುತ್ತೇನೆ. ಚುನಾವಣೆಯ ಹೆಸರಲ್ಲಿ ಅವರು (ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ) ಏನು ಮಾಡಬೇಕೆಂದಿದ್ದಾರೆ ಎಂಬುದು ಸಾಬೀತಾಗಿದೆ. ಅವರಿಗೆ ಮತವನ್ನು ಲೂಟಿ ಮಾಡಬೇಕಿದೆ” ಎಂದು ಅವರು ದೂರಿದ್ದಾರೆ.

2024ರ ಲೋಕಸಭಾ ಚುನಾವಣೆಯ ದಿನಾಂಕಗಳು ಪ್ರಕಟಗೊಳ್ಳುವ ನಿರೀಕ್ಷೆ ಇರುವಾಗಲೇ, ಶನಿವಾರ ಚುನಾವಣಾ ಆಯುಕ್ತ ಅರುಣ್ ಗೋಯಲ್ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಅವರ ಸೇವಾವಧಿಯು ಡಿಸೆಂಬರ್ 5, 2027ರವರೆಗೂ ಇತ್ತು. ಅಲ್ಲದೆ ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನಿವೃತ್ತರಾದ ನಂತರ, ಅರುಣ್ ಗೋಯಲ್ ಅವರ ಸ್ಥಾನಕ್ಕೆ ಏರುವವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News