ಲೋಕಸಭಾ ಚುನಾವಣೆಗೆ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ : ಸಮಾಜವಾದಿ ಪಕ್ಷ ಘೋಷಣೆ
ಲಕ್ನೋ: ಮುಂಬರುವ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಜೊತೆಗಿನ ಮೈತ್ರಿಕೂಟದ ಮೂಲಕ ಎದುರಿಸುವುದಾಗಿ ಸಮಾಜವಾದಿ ಪಕ್ಷ ಬುಧವಾರ ಘೋಷಿಸಿದೆ.
ಉತ್ತರಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ 63ರಲ್ಲಿ ತನ್ನ ಪಕ್ಷವು ಸ್ಪರ್ಧಿಸುವುದು ಮತ್ತು ಉಳಿದ 17 ಸ್ಥಾನಗಳಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಎಂದು ಸಮಾಜವಾದಿ ಪಕ್ಷದ ನಾಯಕ ರವಿದಾಸ್ ಮೆಹ್ರೋತ್ರಾ ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು.
‘‘ಬಿಜೆಪಿಯೇತರ ಮತಗಳು ಹಂಚಿಹೋಗದಂತೆ ತಡೆಯಲು ನಾವು ಪ್ರಯತ್ನಿಸಿದ್ದೇವೆ. ಉತ್ತರಪ್ರದೇಶದ ಎಲ್ಲಾ 80 ಸ್ಥಾನಗಳನ್ನು ಗೆಲ್ಲಲು ನಾವು ಪ್ರಯತ್ನಿಸುತ್ತೇವೆ’’ ಎಂದು ಅವರು ನುಡಿದರು.
ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪ್ರತಿಪಕ್ಷ ಮೈತ್ರಿಕೂಟ ‘ಇಂಡಿಯಾ’ದ ಘಟಕ ಪಕ್ಷಗಳಾಗಿವೆ. ‘ಇಂಡಿಯಾ’ವು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು 28 ಪ್ರತಿಪಕ್ಷಗಳು ಮಾಡಿಕೊಂಡಿರುವ ಮೈತ್ರಿಕೂಟವಾಗಿದೆ.
ಕಾಂಗ್ರೆಸ್ ಜೊತೆಗಿನ ಸ್ಥಾನ ಹಂಚಿಕೆ ಮಾತುಕತೆಗಳು ಬಹುತೇಕ ಅಂತಿಮಗೊಂಡಿವೆ ಎಂಬ ಇಂಗಿತವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಕ್ತಪಡಿಸಿದ ಸ್ವಲ್ಪವೇ ಹೊತ್ತಿನ ಬಳಿಕ ಈ ಘೋಷಣೆ ಹೊರಬಿದ್ದಿದೆ.
ಉತ್ತರಪ್ರದೇಶದ ಮೊರದಾಬಾದ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಯಾದವ್, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಏರ್ಪಡುವುದು ಎಂದು ಹೇಳಿದ್ದರು. ‘‘ಯಾವುದೇ ಸಂಘರ್ಷವಿಲ್ಲ. ಶೀಘ್ರದಲ್ಲೇ ಎಲ್ಲವೂ ನಿಮ್ಮ ಮುಂದೆ ಸ್ಪಷ್ಟಗೊಳ್ಳುತ್ತದೆ’’ ಎಂದಿದ್ದರು.
ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ಸ್ಥಾನ ಹಂಚಿಕೆ ಮಾತುಕತೆಗಳು ತಿಂಗಳುಗಳಿಂದ ನಡೆಯುತ್ತಿದ್ದವು.