ಸಂಭಲ್ ಹಿಂಸಾಚಾರ: ಲೋಕಸಭೆಯಲ್ಲಿ ವಿಪಕ್ಷಗಳಿಂದ ಸಭಾತ್ಯಾಗ

Update: 2024-12-03 07:15 GMT

File Photo: PTI

ಹೊಸದಿಲ್ಲಿ: ಉತ್ತರ ಪ್ರದೇಶದ ಸಂಭಲ್ ನಲ್ಲಿ ಇತ್ತೀಚೆಗೆ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಬಹುತೇಕ ವಿರೋಧ ಪಕ್ಷಗಳ ಸದಸ್ಯರು ಇಂದು ಲೋಕಸಭೆಯಿಂದ ಕೆಲ ಕಾಲ ಸಭಾತ್ಯಾಗ ಮಾಡಿದರು.

ಸದನ ಪ್ರಾರಂಭಗೊಂಡು, ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಳ್ಳಲು ಮುಂದಾಗುತ್ತಿದ್ದಂತೆಯೆ, ತಮ್ಮ ಆಸನದಿಂದ ಮೇಲೆದ್ದು ನಿಂತ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಸಂಭಲ್ ಹಿಂಸಾಚಾರದ ಕುರಿತು ಮಾತನಾಡಲು ಅವಕಾಶ ನೀಡಬೇಕು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾಗೆ ಮನವಿ ಮಾಡಿದರು.

“ಇದು ತುಂಬಾ ಗಂಭೀರ ವಿಷಯ. ಈ ಹಿಂಸಾಚಾರದಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ” ಎಂದು ಅಖಿಲೇಶ್ ಯಾದವ್ ಹೇಳಿದರು.

ಈ ವಿಷಯವನ್ನು ಶೂನ್ಯ ವೇಳೆಯಲ್ಲಿ ಸದಸ್ಯರು ಪ್ರಸ್ತಾಪಿಸಬಹುದು ಎಂದು ಸ್ಪೀಕರ್ ಹೇಳುತ್ತಿದ್ದಂತೆಯೆ, ಅವರ ನಿಲುವನ್ನು ಪ್ರತಿಭಟಿಸಿ ಅಖಿಲೇಶ್ ಯಾದವ್ ಹಾಗೂ ಅವರ ಪಕ್ಷದ ಸಹೋದ್ಯೋಗಿಗಳು ಲೋಕಸಭೆಯಿಂದ ಸಭಾತ್ಯಾಗ ಮಾಡಿದರು. ಇದೇ ವೇಳೆ, ಕೆಲವು ಸಮಾಜವಾದಿ ಪಕ್ಷದ ಸದಸ್ಯರು ಸದನದ ಬಾವಿಗೆ ನುಗ್ಗಿ, ಘೋಷಣೆಗಳನ್ನು ಕೂಗಿದರು.

ಸದನದ ಬಾವಿಯಲ್ಲಿ ಸಮಾಜವಾದಿ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸುವಾಗ, ಸಮಾಜವಾದಿ ಪಕ್ಷದ ಸದಸ್ಯರ ಪ್ರತಿಭಟನೆಯೊಂದಿಗೆ ಪಾಲ್ಗೊಳ್ಳುವಂತೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಸದಸ್ಯರಿಗೆ ಡಿಎಂಕೆ ಸದಸ್ಯ ಎ.ರಾಜಾ ಒತ್ತಾಯಿಸುತ್ತಿದ್ದದ್ದು ಕಂಡು ಬಂದಿತು.

ಸಮಾಜವಾದಿ ಪಕ್ಷದ ಸಂಸದರ ಬೆಂಬಲಕ್ಕೆ ಎನ್ಸಿಪಿ ಹಾಗೂ ಶಿವಸೇನೆ (ಉದ್ಧವ್ ಬಣ) ಸದಸ್ಯರು ನಿಂತರು.

ಕೆಲ ಕಾಂಗ್ರೆಸ್ ಸದಸ್ಯರೂ ತಮ್ಮ ಆಸನದಿಂದ ಮೇಲೆದ್ದು ನಿಂತರೆ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

ಪ್ರತಿಭಟನೆ ನಡೆಯುತ್ತಿರುವಾಗಲೇ, ಈ ಕುರಿತು ಚರ್ಚಿಸಲು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅಖಿಲೇಶ್ ಯಾದವ್ ಬಳಿಗೆ ತೆರಳಿದರು.

ಕೆಲ ಸಮಯದ ನಂತರ, ಲೋಕಸಭೆಯಿಂದ ಹೊರ ನಡೆಯುವಂತೆ ತಮ್ಮ ಪಕ್ಷದ ಸದಸ್ಯರು ಹಾಗೂ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ಸದಸ್ಯರಿಗೆ ಅಖಿಲೇಶ್ ಯಾದವ್ ಸೂಚಿಸಿದರು. ಇದರ ಬೆನ್ನಿಗೇ ವಿರೋಧ ಪಕ್ಷಗಳು ಲೋಕಸಭೆಯಿಂದ ಸಭಾತ್ಯಾಗ ನಡೆಸಿದವು.

ನಂತರ, ಪ್ರಶ್ನೋತರ ಕಲಾಪದಲ್ಲಿ ಭಾಗವಹಿಸಲು ಅವರೆಲ್ಲ ಲೋಕಸಭೆಗೆ ಮರಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News