ಸನಾತನ ಧರ್ಮ ನಿರ್ಮೂಲನ ಹೇಳಿಕೆ | ಉದಯನಿಧಿ ಸ್ಟಾಲಿನ್ ವಿರುದ್ಧ ಹೊಸ ಎಫ್‌ಐಆರ್‌ಗಳಿಗೆ ಸುಪ್ರೀಂ ಕೋರ್ಟ್ ನಿರ್ಬಂಧ

Update: 2025-03-06 19:49 IST
ಸನಾತನ ಧರ್ಮ ನಿರ್ಮೂಲನ ಹೇಳಿಕೆ | ಉದಯನಿಧಿ ಸ್ಟಾಲಿನ್ ವಿರುದ್ಧ ಹೊಸ ಎಫ್‌ಐಆರ್‌ಗಳಿಗೆ ಸುಪ್ರೀಂ ಕೋರ್ಟ್ ನಿರ್ಬಂಧ
  • whatsapp icon

ಹೊಸದಿಲ್ಲಿ: ‘ಸನಾತನ ಧರ್ಮ ನಿರ್ಮೂಲನ’ ಹೇಳಿಕೆಗೆ ಸಂಬಂಧಿಸಿದಂತೆ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ವಿರುದ್ಧ ಹೊಸ ಎಫ್‌ಐಆರ್‌ಗಳನ್ನು ದಾಖಲಿಸುವುದನ್ನು ಸರ್ವೋಚ್ಚ ನ್ಯಾಯಾಲಯವು ಗುರುವಾರ ನಿರ್ಬಂಧಿಸಿದೆ.

ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಟ್ಟುಗೂಡಿಸುವಂತೆ ಕೋರಿ ಉದಯನಿಧಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠವು,‘ಬಲವಂತದ ಕ್ರಮಗಳ ವಿರುದ್ಧ ಮಧ್ಯಂತರ ಆದೇಶವು ಮುಂದುವರಿಯುತ್ತದೆ ಮತ್ತು ಹೊಸದಾಗಿ ಸೇರ್ಪಡೆಗೊಂಡಿರುವ ಪ್ರಕರಣಗಳಿಗೂ ಅನ್ವಯಿಸುತ್ತದೆ. ಅವರ ವಿರುದ್ಧ ಹೊಸದಾಗಿ ಯಾವುದೇ ಎಫ್‌ಐಆರ್ ದಾಖಲಿಸುವಂತಿಲ್ಲ ಎಂದು ನಾವು ನಿರ್ದೇಶನ ನೀಡುತ್ತಿದ್ದೇವೆ’ ಎಂದು ಹೇಳಿತು. ಪ್ರಕರಣದ ಮುಂದಿನ ವಿಚಾರಣೆ ಎ.28ರಂದು ನಡೆಯಲಿದೆ.

ಉದಯನಿಧಿ ವಿರುದ್ಧ ಬಿಹಾರದಲ್ಲಿ ಹೊಸ ಪ್ರಕರಣ ದಾಖಲಾದ ಬಳಿಕ ಸರ್ವೋಚ್ಚ ನ್ಯಾಯಾಲಯದ ಈ ಆದೇಶ ಹೊರಬಿದ್ದಿದೆ.

2023ರಲ್ಲಿ ಚೆನ್ನೈನಲ್ಲಿ ನಡೆದಿದ್ದ ಸಮ್ಮೇಳನವೊಂದರಲ್ಲಿ ತನ್ನ ವಿವಾದಾತ್ಮಕ ಹೇಳಿಕೆಗಾಗಿ ಉದಯನಿಧಿ ಮಹಾರಾಷ್ಟ್ರ,ಬಿಹಾರ,ಜಮ್ಮು ಮತ್ತು ಕರ್ನಾಟಕದಲ್ಲಿ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಮಹಾರಾಷ್ಟ್ರ ಸರಕಾರದ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ನಿರ್ಮೂಲನದ ಕರೆಗೆ ಗುರಿಯಾಗಿದ್ದ ಸಮುದಾಯವು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸುವುದಿಲ್ಲ ಎಂಬ ಕಾರಣಕ್ಕೆ ಇಂತಹ ಹೇಳಿಕೆಗಳನ್ನು ನೀಡಬಾರದು ಎದು ಹೇಳಿದರು.

ಚೆನ್ನೈನಲ್ಲಿ ತಮಿಳುನಾಡು ಪ್ರಗತಿಪರ ಲೇಖಕರು ಮತ್ತು ಕಲಾವಿದರ ಸಂಘದ ಸಮ್ಮೇಳನದಲ್ಲಿ ಮಾತನಾಡಿದ್ದ ಉದಯನಿಧಿ ‘ಸನಾತನ ಧರ್ಮ’ವನ್ನು ಕೊರೊನಾವೈರಸ್,ಡೆಂಗಿ ಮತ್ತು ಮಲೇರಿಯಾಕ್ಕೆ ಹೋಲಿಸಿ ಅದನ್ನು ನಾಶಗೊಳಿಸಬೇಕು ಎಂದು ಹೇಳಿದ್ದರು. ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಮತ್ತು ಅದನ್ನು ನಿರ್ಮೂಲನ ಮಾಡಬೇಕು ಎಂದು ಹೇಳಿದ್ದರು.

ಜಾತಿ ತಾರತಮ್ಯದ ಹಿನ್ನೆಲೆಯಲ್ಲಿ ತಾನು ಮಾತನಾಡಿದ್ದೆ ಎಂದು ಉದಯನಿಧಿ ನ್ಯಾಯಾಲಯದಲ್ಲಿ ವಾದಿಸಿದರು.

ಇದಕ್ಕೂ ಮುನ್ನ ಉದಯನಿಧಿ ಹೇಳಿಕೆಗಳಿಗಾಗಿ ಅವರನ್ನು ಕಟುವಾಗಿ ಟೀಕಿಸಿದ ಸರ್ವೋಚ್ಚ ನ್ಯಾಯಾಲಯವು, ಅವರು ಸಂವಿಧಾನದ ವಿಧಿ 19(1)(ಎ) ಮತ್ತು ವಿಧಿ 25ರಡಿ ತನ್ನ ಹಕ್ಕುಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡುವಾಗ ಅದರ ಪರಿಣಾಮಗಳ ಬಗ್ಗೆಯೂ ತಿಳಿದಿರಬೇಕು ಎಂದು ಹೇಳಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News