ಸಂಸತ್ ಭದ್ರತಾ ವೈಫಲ್ಯ: ಸುಳ್ಳು ಸುದ್ದಿ ಹರಡಿದ ತಮಿಳುನಾಡು ಬಿಜೆಪಿ ಪದಾಧಿಕಾರಿಯ ವಿರುದ್ಧ ಪ್ರಕರಣ ದಾಖಲು

Update: 2023-12-17 09:59 GMT

ಪ್ರವೀಣ್ ರಾಜ್‌ (Photo:X)

ಚೆನ್ನೈ: ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇತ್ತೀಚಿನ ಸಂಸತ್ ಭದ್ರತೆ ಉಲ್ಲಂಘನೆಯನ್ನು ತಮ್ಮ ರಾಜಕೀಯ ಎದುರಾಳಿಗಳು ಅಥವಾ ನಿರ್ದಿಷ್ಟ ಸಮುದಾಯದ ಹೆಸರು ಕೆಡಿಸಲು ಬಳಸಿಕೊಳ್ಳಲು ಪ್ರಯತ್ನಿಸುತ್ತಿವೆ.

ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಕಲಿ ಸುದ್ದಿಗಳು ಮತ್ತು ದ್ವೇಷ ಪ್ರಸಾರದ ನಡುವೆಯೇ ತಮಿಳುನಾಡಿನ ತಿರುಚ್ಚಿ ಸೈಬರ್ ಕ್ರೈಂ ಪೋಲಿಸರು ಡಿ.೧೩ರ ಸಂಸತ್ ಭದ್ರತೆ ಉಲ್ಲಂಘನೆ ಕುರಿತು ಸುಳ್ಳುಸುದ್ದಿಯನ್ನು ಹರಡಿದ್ದ ಆರೋಪದಲ್ಲಿ ರಾಜ್ಯ ಬಿಜೆಪಿ ಯುವಮೋರ್ಚಾದ ಸಾಮಾಜಿಕ ಮಾಧ್ಯಮ ಉಸ್ತುವಾರಿ ಪ್ರವೀಣ್ ರಾಜ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಸಾರ್ವಜನಿಕರ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್ ಗೆ ಜಿಗಿದಿದ್ದ ದುಷ್ಕರ್ಮಿಗಳಿಗೆ ಧರ್ಮಪುರಿಯ ಡಿಎಂಕೆ ಸಂಸದ ಡಾ.ಸೆಂಥಿಲ್ ಕುಮಾರ ಅವರು ಪಾಸ್ಗಳನ್ನು ವಿತರಿಸಿದ್ದರು ಎಂಬ ಸುಳ್ಳುಸುದ್ದಿಯನ್ನು ಪ್ರವೀಣರಾಜ್ ಹರಡಿದ್ದರು.

ಪ್ರವೀಣರಾಜ್ ‘ಸಂಘಿ ಪ್ರಿನ್ಸ್ ’ಖಾತೆಯಡಿ ಎಕ್ಸ್ ನಲ್ಲಿಯ ಪೋಸ್ಟ್ ನಲ್ಲಿ ‘ಲೋಕಸಭೆಯಲ್ಲಿ ಭದ್ರತಾ ಉಲ್ಲಂಘನೆ ಸಂಭವಿಸಿದೆ. ಏಕೆಂದು ನಿಮಗೆ ಗೊತ್ತೇ? ನಿಮ್ಮಂಥ ಹೊಣೆಗೇಡಿ ಸಂಸದರು ಪ್ರಚಾರಕ್ಕಾಗಿ ಮತ್ತು ಹಿನ್ನೆಲೆಯನ್ನು ಪರಿಶೀಲಿಸದೆ ಸಾಮಾಜಿಕ ಮಾಧ್ಯಮಗಳ ಮೂಲಕ ಸಂದರ್ಶಕರ ಪಾಸ್ ಗಳನ್ನು ವಿತರಿಸುತ್ತಿರುವುದು ಇದಕ್ಕೆ ಕಾರಣವಾಗಿದೆ’ ಎಂದು ಬರೆದಿದ್ದರು. ಈ ಪೋಸ್ಟ್ ಅನ್ನು ಈಗ ಅಳಿಸಲಾಗಿದೆ.

ಭದ್ರತಾ ವೈಫಲ್ಯದ ಹೊಣೆಯನ್ನು ಡಿಎಂಕೆ ಸಂಸದರೇ ವಹಿಸಿಕೊಳ್ಳಬೇಕು ಎಂದೂ ಪ್ರವೀಣರಾಜ್ ಆಗ್ರಹಿಸಿದ್ದರು.

ಪ್ರವೀಣರಾಜ್ ತಲೆಮರೆಸಿಕೊಂಡಿರುವುದಾಗಿ ಪೋಲಿಸ್ ಮೂಲಗಳು ತಿಳಿಸಿವೆ.

ಈ ವರ್ಷದ ಅಕ್ಟೋಬರ್ ನಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಪ್ರವೀಣರಾಜ್ ರನ್ನು ಕರೂರು ಪೋಲಿಸರು ಬಂಧಿಸಿದ್ದರು.

ಈ ಮೊದಲು, ಸಂಸತ್ ಭದ್ರತೆ ಉಲ್ಲಂಘನೆ ಪ್ರಕರಣದ ಆರೋಪಿಗಳ ಪೈಕಿ ಓರ್ವನಾಗಿರುವ ಮನೋರಂಜನ ಡಿ. ಸ್ಟುಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್ಎಫ್ಐ)ದ ಕಾರ್ಯಕರ್ತ ಎಂದು ಬಿಂಬಿಸಲು ಪ್ರಯತ್ನ ನಡೆದಿತ್ತು. ಪ್ರಕರಣದಲ್ಲಿ ಎಸ್ಎಫ್ಐ ಕಾರ್ಯಕರ್ತನೋರ್ವ ಭಾಗಿಯಾಗಿದ್ದಾನೆ ಎಂದು ಪ್ರತಿಪಾದಿಸಿ ಆರೋಪಿಯ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಿಸಲಾಗಿತ್ತು. ವರದಿಯ ಪ್ರಕಾರ ಮನೋರಂಜನ ಡಿ.ಎಂದು ಗುರುತಿಸಿ ಎಸ್ಎಫ್ಐ ಮೈಸೂರು ಘಟಕದ ಟಿ.ಎಸ್.ವಿಜಯಕುಮಾರ ಅವರ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News