ಬಿಜೆಪಿ ಭ್ರಷ್ಟಾಚಾರದ ಬಗೆಗಿನ ಅಣ್ಣಾ ಹಝಾರೆ ಮೌನವನ್ನು ಪ್ರಶ್ನಿಸಿದ ಸಂಜಯ್ ರಾವತ್

ಸಂಜಯ್ ರಾವತ್| PC : PTI
ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಪರಾಭವದಿಂದ ಸಾಮಾಜಿಕ ಹೋರಾಟಗಾರ ಅಣ್ಣಾ ಹಝಾರೆ ಸಮಾಧಾನಗೊಂಡಿದ್ದಾರೆ ಎಂದು ಹೇಳಿರುವ ಶಿವಸೇನೆ (ಉದ್ಧವ್ ಠಾಕ್ರೆ) ನಾಯಕ ಸಂಜಯ್ ರಾವತ್, ನರೇಂದ್ರ ಮೋದಿ ಸರಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಕುರಿತು ಅಣ್ಣಾ ಹಝಾರೆ ಮೌನ ವಹಿಸಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ಆ ಮೂಲಕ ಹೊಸ ರಾಜಕೀಯ ಚರ್ಚೆಗೆ ಕಿಡಿ ಹೊತ್ತಿಸಿದ್ದಾರೆ.
ರವಿವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸಂಜಯ್ ರಾವತ್, “ನರೇಂದ್ರ ಮೋದಿ ಆಡಳಿತದಲ್ಲಿ ಭ್ರಷ್ಟಾಚಾರ ನಡೆಯುವಾಗ ಅಣ್ಣಾ ಹಝಾರೆ ಎಲ್ಲಿದ್ದರು? ದೇಶದ ಸಂಪತ್ತು ಓರ್ವ ಉದ್ಯಮಿಯ ಬಳಿ ಕ್ರೋಡೀಕೃತಗೊಳ್ಳುವ ಮೂಲಕ ದೇಶದ ಸಂಪತ್ತನ್ನು ಲೂಟಿ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವ ಉಳಿಯುವುದಾದರೂ ಹೇಗೆ? ಅಣ್ಣಾ ಹಝಾರೆ ಮೌನದ ಹಿಂದಿನ ಕಾರಣವೇನು?” ಎಂದು ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರ, ಹರ್ಯಾಣ ಹಾಗೂ ದಿಲ್ಲಿಯಲ್ಲಿನ ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳತ್ತ ಬೊಟ್ಟು ಮಾಡಿದ ಅವರು, ಚುನಾವಣಾ ಪ್ರಕ್ರಿಯೆಯಲ್ಲಿನ ಅಕ್ರಮಗಳ ಕುರಿತೂ ಮಾತನಾಡಿದರು. “ಮಹಾರಾಷ್ಟ್ರ ಮತ್ತು ದಿಲ್ಲಿಯಲ್ಲಿ ಒಂದೇ ಬಗೆಯ ಮತದಾರರ ಪಟ್ಟಿಯ ಗೊಂದಲವಾಗಿದೆ. ಈ ಸಮಸ್ಯೆ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ” ಎಂದು ಅವರು ಹೇಳಿದ್ದಾರೆ. 2014ರಿಂದ ಚುನಾವಣೆಗಳನ್ನು ಸಾಂವಿಧಾನಿಕ ರೂಢಿಯಿಂದ ದಾರಿ ತಪ್ಪಿಸಲಾಗಿದ್ದು, ಅಕ್ರಮ ಹಾಗೂ ಹಣ ಬಲದ ಮೂಲಕ ಗೆಲುವನ್ನು ಸಾಧಿಸಲಾಗುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.
ಒಂದು ವೇಳೆ ಆಪ್ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಏರ್ಪಟ್ಟಿದ್ದರೆ ದಿಲ್ಲಿ ಫಲಿತಾಂಶವೇ ವಿಭಿನ್ನವಾಗಿರುತ್ತಿತ್ತು ಎಂದು ಅಭಿಪ್ರಾಯ ಪಟ್ಟಿರುವ ಅವರು, ಬಿಜೆಪಿ ಪಾರಮ್ಯಕ್ಕೆ ತಿರುಗೇಟು ನೀಡಲು ವಿರೋಧ ಪಕ್ಷಗಳಲ್ಲಿ ಒಗ್ಗಟ್ಟಿನ ಅಗತ್ಯವಿದೆ ಎಂದು ಕರೆ ನೀಡಿದ್ದಾರೆ.
ಈ ನಡುವೆ, ಶನಿವಾರ ದಿಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶಗೊಂಡ ನಂತರ ಮಾತನಾಡಿದ್ದ ಅಣ್ಣಾ ಹಝಾರೆ, ತಮ್ಮ ಸಲಹೆಯನ್ನು ನಿರ್ಲಕ್ಷಿಸಿದ್ದಕ್ಕೆ ಕೇಜ್ರಿವಾಲ್ ರನ್ನು ಟೀಕಿಸಿದ್ದರು. “”ನಾನು ಯಾವಾಗಲೂ ಅಭ್ಯರ್ಥಿಯ ನಡತೆ ಶುದ್ಧವಾಗಿರಬೇಕು, ಅವರ ಬದುಕು ದೂಷಣೆರಹಿತವಾಗಿರಬೇಕು ಹಾಗೂ ಅವರು ತ್ಯಾಗ ಮಾಡಬೇಕು ಎಂದು ಹೇಳಿದ್ದೇನೆ. ಈ ಗುಣಗಳು ಜನರಲ್ಲಿ ವಿಶ್ವಾಸವನ್ನು ಮೂಡಿಸುತ್ತವೆ. ಇದನ್ನು ನಾನು ಕೇಜ್ರಿವಾಲ್ ಗೆ ಹೇಳಿದರೂ, ಆತ ಅದನ್ನು ಕೇಳಲಿಲ್ಲ. ಆತ ಹಣ ಮತ್ತು ಅಧಿಕಾರದ ಮದವೇರಿಸಿಕೊಂಡಿದ್ದ” ಎಂದು ಆಪ್ ಸರಕಾರದ ವಿವಾದಾತ್ಮಕ ಅಬಕಾರಿ ನೀತಿಯನ್ನು ಉಲ್ಲೇಖಿಸಿ ಟೀಕಿಸಿದ್ದರು. ನಂತರ ಈ ನೀತಿಯನ್ನು ಆಪ್ ಸರಕಾರ ಹಿಂಪಡೆದಿತ್ತು.