ಸರ್ಕಾರದ ವಿರುದ್ಧ ಪ್ರತಿಭಟಿಸಲು ಸಿಜೆಐ ಚಂದ್ರಚೂಡ್ ಕರೆ ನೀಡಿದ್ದಾರೆಂದು ನಕಲಿ ಪೋಸ್ಟ್ ವೈರಲ್
ಹೊಸದಿಲ್ಲಿ: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ ಚಂದ್ರಚೂಡ್ ಅವರ ಫೋಟೋ ಬಳಸಿ, ಸಾರ್ವಜನಿಕರಿಗೆ ಪ್ರತಿಭಟಿಸಲು ಕರೆ ನೀಡುವ ʼಸುಳ್ಳು ಹೇಳಿಕೆʼಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ಸಾರ್ವಜನಿಕ ಸಂಪರ್ಕ ಕಚೇರಿ ಸೋಮವಾರ (ಆಗಸ್ಟ್ 14) ರಂದು ತಿಳಿಸಿದೆ.
ಇದು ʼನಕಲಿ, ಕೆಟ್ಟ ಉದ್ದೇಶ ಹೊಂದಿರುವ ಹಾಗೂ ಕುಚೇಷ್ಟೆಯʼ ಪೋಸ್ಟ್‌ಗಳು ಎಂದು ಸುಪ್ರೀಂ ಕೋರ್ಟ್ ಕಛೇರಿ ಹೇಳಿದೆ.
'ಸರ್ವಾಧಿಕಾರಿ ಸರ್ಕಾರದ' ವಿರುದ್ಧ ತಮ್ಮ ಹಕ್ಕುಗಳಿಗಾಗಿ ಹೋರಾಡಲು ಒಗ್ಗಟ್ಟಾಗಿ ಬೀದಿಗಿಳಿಯುವಂತೆ ಸಾರ್ವಜನಿಕರಿಗೆ ಸಿಜೆಐ ಡಿವೈ ಚಂದ್ರಚೂಡ್ ಅವರು ಕರೆ ನೀಡಿದ್ದಾರೆ ಎಂದು ಪ್ರತಿಪಾದಿಸುವ ನಕಲಿ ಪೋಸ್ಟರ್‌ಗಳು ವೈರಲ್ ಆದ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಕಛೇರಿ ಸ್ಪಷ್ಟೀಕರಣ ನೀಡಿದೆ.
ʼಒಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ (ಆಡಳಿತದ ವಿರುದ್ಧ ಪ್ರತಿಭಟಿಸಲು ಸಾರ್ವಜನಿಕರನ್ನು ಆಹ್ವಾನಿಸುವ) ಸಿಜೆಐ ಅವರ ಫೈಲ್ ಛಾಯಾಚಿತ್ರವನ್ನು ಬಳಸಿ ತಪ್ಪಾಗಿ ಪ್ರಸಾರ ಮಾಡುತ್ತಿರುವುದು ಭಾರತದ ಸುಪ್ರೀಂ ಕೋರ್ಟ್‌ನ ಗಮನಕ್ಕೆ ಬಂದಿದೆ.
ಪೋಸ್ಟ್ ನಕಲಿ, ದುರುದ್ದೇಶಪೂರ್ವಕ ಮತ್ತು ಕುಚೇಷ್ಟೆಯಾಗಿರುತ್ತದೆ. ಅಂತಹ ಯಾವುದೇ ಹೇಳಿಕೆಯನ್ನು ಭಾರತದ ಮುಖ್ಯ ನ್ಯಾಯಾಧೀಶರು ನೀಡಿಲ್ಲ. ಈ ಬಗ್ಗೆ ಕಾನೂನು ಜಾರಿ ಅಧಿಕಾರಿಗಳೊಂದಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆʼ ಎಂದು ನ್ಯಾಯಾಲಯದ ಸಾರ್ವಜನಿಕ ಸಂಪರ್ಕ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.