ಗೋಪ್ಯತೆ, ರಾಜಕೀಯ ದ್ವೇಷ ಮತ್ತು ಪ್ರತಿಷ್ಠೆಗಳೇ ಚೀತಾ ಪ್ರಾಜೆಕ್ಟ್‌ನ ಸಮಸ್ಯೆಗಳು: ದಕ್ಷಿಣ ಆಫ್ರಿಕಾ ತಜ್ಞ

Update: 2024-01-21 13:08 GMT

Photo: X/@moefcc

ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಖಂಡಾಂತರ ಚೀತಾ ಪ್ರಾಜೆಕ್ಟ್‌ಗೆ ನೆಲೆಯಾಗಿರುವ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಆಫ್ರಿಕಾದಿಂದ ತರಿಸಲಾಗಿದ್ದ ಶೌರ್ಯ (ಅಲಿಯಾಸ್ ಫ್ರೆಡ್ಡೀ) ಚೀತಾ ಜ.16ರಂದು ಕೊನೆಯುಸಿರೆಳೆದಿದೆ. ಇದರೊಂದಿಗೆ ಕುನೊದಲ್ಲಿ ಈವರೆಗೆ ಸಾವನ್ನಪ್ಪಿರುವ ವಯಸ್ಕ ಚೀತಾಗಳ ಸಂಖ್ಯೆ ಏಳಕ್ಕೇರಿದೆ.

ಈ ಹಿನ್ನೆಲೆಯಲ್ಲಿ ಸುದ್ದಿ ಜಾಲತಾಣ ‘ದಿ ವೈರ್ ’ಆಫ್ರಿಕನ್ ಚೀತಾ ತಜ್ಞ ಆಡ್ರಿಯನ್ ಟಾರ್ಡಿಫ್ ಅವರೊಂದಿಗೆ ಚೀತಾ ಪ್ರಾಜೆಕ್ಟ್ ಮತ್ತು ಅದರಲ್ಲಿ ಅವರ ಪಾತ್ರದ ಕುರಿತು ವಿಶೇಷ ಇ-ಮೇಲ್ ಸಂದರ್ಶನವನ್ನು ನಡೆಸಿದೆ. ಪ್ರಸ್ತುತ ಭಾರತದಲ್ಲಿ ನೆಲೆಸಿರುವ ಪಶುವೈದ್ಯಕೀಯ ವನ್ಯಜೀವಿ ತಜ್ಞ ಟಾರ್ಡಿಫ್ ಅವರು ಫೆಬ್ರವರಿ 2023ರಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಭಾರತಕ್ಕೆ ತಂದಿದ್ದ ತಂಡದ ಭಾಗವಾಗಿದ್ದರು ಮತ್ತು ಮೇ 2023ರಲ್ಲಿ ಭಾರತ ಸರಕಾರವು ಅವರನ್ನು ತಜ್ಞರಲ್ಲೋರ್ವರಾಗಿ ಪಟ್ಟಿ ಮಾಡಿತ್ತು. ಅವರ ಸಂದರ್ಶನದಲ್ಲಿಯ ಆಯ್ದ ಭಾಗಗಳು ಇಲ್ಲಿವೆ:

*ಶೌರ್ಯ ಚೀತಾದ ಸ್ಥಿತಿಯ ಬಗ್ಗೆ ನನ್ನನ್ನೆಂದೂ ಸಂಪರ್ಕಿಸಲಾಗಿರಲಿಲ್ಲ. ಎಕ್ಸ್ (ಟ್ವಿಟರ್)ನಲ್ಲಿ ಆನ್‌ಲೈನ್ ಸುದ್ದಿ ವರದಿಯ ಮೂಲಕ ನನಗೆ ಅದರ ಸಾವಿನ ಕುರಿತು ಗೊತ್ತಾಗಿತ್ತು. ಕಳೆದ ವರ್ಷದ ಜುಲೈನಿಂದ ಕುನೊದಲ್ಲಿನ ಚೀತಾಗಳ ಆರೋಗ್ಯದ ಕುರಿತು ಯಾವುದೇ ನೇರ ಮಾಹಿತಿಯನ್ನು ನಾನು ಸ್ವೀಕರಿಸಿಲ್ಲ. ಎರಡನೇ ಚೀತಾದ ಸಾವಿನ ಬಳಿಕ 2023 ಎಪ್ರಿಲ್ ಅಂತ್ಯದಲ್ಲಿ ಕುನೋದಿಂದ ನನಗೆ ನೇರ ಮಾಹಿತಿಗಳು ಬರುವುದು ಕಡಿಮೆಯಾಗಿತ್ತು. ಜು.18ರಂದು ಕುನೊದಲ್ಲಿನ ಪಶುವೈದ್ಯರಿಂದ ಕೊನೆಯ ಬಾರಿಗೆ ನಾನು ನೇರ ಮಾಹಿತಿಯನ್ನು ಸ್ವೀಕರಿಸಿದ್ದೆ. ಅಲ್ಲಿಂದೀಚೆಗೆ ಯೋಜನೆಯಲ್ಲಿ ಭಾಗಿಯಾಗಿರುವ ಯಾವುದೇ ಭಾರತೀಯ ಅಧಿಕಾರಿ ನನ್ನೊಂದಿಗೆ ನೇರ ಸಂಪರ್ಕದಲ್ಲಿಲ್ಲ.

*ಗಂಡು ಚೀತಾ ಉದಯ ಸಾವಿಗೆ ಕೆಲವೇ ದಿನಗಳ ಮೊದಲು ಎಪ್ರಿಲ್ 2023ರಲ್ಲಿ ಅದರ ವೀಡಿಯೊ ಫೂಟೇಜ್ ಪತ್ರಿಕೆಗಳಿಗೆ ಸೋರಿಕೆಯಾಗಿತ್ತು. ಇದಕ್ಕೂ ಮುನ್ನ ಈ ಫೂಟೇಜ್‌ನ್ನು ನನ್ನೊಂದಿಗೆ ಹಂಚಿಕೊಳ್ಳಲಾಗಿತ್ತು ಮತ್ತು ಪತ್ರಿಕೆಗಳಿಗೆ ಅದನ್ನು ಸೋರಿಕೆ ಮಾಡಿದ್ದು ನಾನೇ ಎಂದು ಅವರು ಶಂಕಿಸಿದ್ದರು ಎಂದು ನಾನು ಭಾವಿಸಿದ್ದೇನೆ. ಆದರೆ ಖಂಡಿತವಾಗಿಯೂ ಆ ಕೆಲಸವನ್ನು ನಾನು ಮಾಡಿರಲಿಲ್ಲ. ಹೆಚ್ಚಿನ ಚೀತಾಗಳು ಸಾಯತೊಡಗಿದಾಗ ಮತ್ತು ನನ್ನೊಂದಿಗೆ ಕಡಿಮೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾಗ ಸಂಪೂರ್ಣ ಹತಾಶಗೊಂಡಿದ್ದ ನಾನು ಪತ್ರಿಕೆಗಳೊಂದಿಗೆ ಮಾತನಾಡಲು ಆರಂಭಿಸಿದ್ದೆ, ತನ್ಮೂಲಕ ಹೆಚ್ಚಿನ ಸಾವುಗಳನ್ನು ತಡೆಯಲು ನನ್ನನ್ನು ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಅಧಿಕಾರಿಗಳ ಮನವೊಲಿಸಲು ನಾನು ಯತ್ನಿಸಿದ್ದೆ. ಆದರೆ ಇದು ವ್ಯತಿರಿಕ್ತ ಪರಿಣಾಮವನ್ನು ಬೀರಿತ್ತು ಮತ್ತು ಅವರು ಕ್ರಮೇಣ ನನ್ನನ್ನು ಯೋಜನೆಯಿಂದಲೇ ಬಹಿಷ್ಕರಿಸಿದ್ದರು.

*ಯೋಜನೆಯಲ್ಲಿ ನನ್ನ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದಂತೆ ನನ್ನೊಂದಿಗೆ ಯಾವುದೇ ವಿಧ್ಯುಕ್ತ ಸಂವಹನ ನಡೆದಿರಲಿಲ್ಲ. ಕೆಲವು ಹೊಂದಾಣಿಕೆಯನ್ನು ಆಶಿಸಿ ನಾನು ಪ್ರಾಜೆಕ್ಟ್ ಚೀತಾ ಸ್ಟಿಯರಿಂಗ್ ಕಮಿಟಿಯ ಅಧ್ಯಕ್ಷರಿಗೆ ಪತ್ರವನ್ನು ಬರೆದಿದ್ದೆ. ಅವರು ಉತ್ತರಿಸುವುದಿರಲಿ, ನನ್ನ ಪತ್ರದ ಸ್ವೀಕೃತಿಯ ಬಗ್ಗೆಯೂ ನನಗೆ ತಿಳಿಸಿರಲಿಲ್ಲ. ಈ ವಿಷಯವನ್ನು ಮುಂದುವರಿಸುವುದು ಸಮಯ ವ್ಯರ್ಥ ಎಂದು ನಾನು ಪರಿಗಣಿಸಿದ್ದೆ.

*ಕಳೆದ ವರ್ಷದ ಜು.11ರಂದು ಗಂಡು ಚೀತಾದ ಸಾವಿನ ಮೂರು ದಿನಗಳ ಬಳಿಕ ಜು.14ರಂದು ಇನ್ನೊಂದು ಚೀತಾ ಮೃತಪಟ್ಟಿತ್ತು. ಮೊದಲ ಚಿರತೆಯ ಕುತ್ತಿಗೆ ಪ್ರದೇಶದಲ್ಲಿ ಗಾಯಗಳಾಗಿದ್ದು ಹುಳಗಳು ತುಂಬಿಕೊಂಡಿದ್ದವು. ಹೀಗಾಗಿ ಮರಣೋತ್ತರ ಪರೀಕ್ಷೆಯ ಮುನ್ನವೇ ಅದರ ಸಾವಿಗೆ ಕಾರಣ ಸ್ಪಷ್ಟವಾಗಬೇಕಿತ್ತು. ಹೆಣ್ಣು ಚಿರತೆಯ ದಾಳಿಯಿಂದ ಉಂಟಾಗಿದ್ದ ಗಾಯಗಳಿಂದ ಅದು ಮೃತಪಟ್ಟಿತ್ತು ಎಂದು ಅಧಿಕಾರಿಗಳು ಈಗಲೂ ನಂಬಿದ್ದಾರೆ. ಮೊದಲ ಪ್ರಕರಣದಲ್ಲಿ ಚೀತಾದ ಸಾವಿಗೆ ನಿಖರ ಕಾರಣವನ್ನು ಪತ್ತೆ ಹಚ್ಚಿದ್ದರೆ ನಂತರದ ದಿನಗಳಲ್ಲಿ ಇನ್ನೂ ಎರಡು ಚೀತಾಗಳ ಸಾವುಗಳನ್ನು ತಪ್ಪಿಸಬಹುದಿತ್ತು.

*ಗೋಪ್ಯತೆ,ರಾಜಕೀಯ ದ್ವೇಷ ಮತ್ತು ಯೋಜನೆಯಲ್ಲಿ ಭಾಗಿಯಾಗಿದ್ದವರ ಅಹಂಕಾರಗಳು ಪ್ರಾಜೆಕ್ಟ್ ಚೀತಾದ ಮುಖ್ಯ ಸಮಸ್ಯೆಗಳಾಗಿವೆ ಎಂದು ನಾನು ಭಾವಿಸಿದ್ದೇನೆ. ಯೋಜನೆಯ ಉನ್ನತ ಸ್ವರೂಪವು ಕೆಲವು ಜನರು ಅಧಿಕಾರದಲ್ಲಿರುವವರ ಜೊತೆಗೆ ಗಮನಾರ್ಹ ರಾಜಕೀಯ ಲಾಭವನ್ನು ಗಳಿಸಬಹುದಾದ ಸ್ಥಿತಿಯನ್ನು ಸೃಷ್ಟಿಸಿದೆ. ಪ್ರೊ.ವೈ.ವಿ.ಝಾಲಾರಂತಹ ವಿಜ್ಞಾನಿಗಳು ಮತ್ತು ನಾನು ಸತ್ಯವನ್ನು ಹೇಳಲು ಬಯಸಿದ್ದಕ್ಕಾಗಿ ನಮ್ಮನ್ನು ಕಡೆಗಣಿಸಲಾಗಿತ್ತು. ನಾವು ಕೆಲಸ ಮಾಡಲು ಯಾವುದೇ ನೈಜ ಮಾದರಿ ಅಥವಾ ಪೂರ್ವನಿದರ್ಶನ ಹೊಂದಿರದ್ದರಿಂದ ಅದು ಯಾವಾಗಲೂ ಸವಾಲಿನ ಯೋಜನೆಯಾಗಿತ್ತು. ನಿಖರವಾದ ವೈಜ್ಞಾನಿಕ ಮಾಹಿತಿಗಳನ್ನು ಸಂಗ್ರಹಿಸುವುದು ಮತ್ತು ಅದನ್ನು ಯೋಜನೆಯಲ್ಲಿ ಭಾಗಿಯಾದ ಎಲ್ಲರೊಂದಿಗೆ ಮುಕ್ತ ಮತ್ತು ಪಾರದರ್ಶಕ ರೀತಿಯಲ್ಲಿ ಹಂಚಿಕೊಳ್ಳಬೇಕಾದ್ದು ಮುಖ್ಯವಾಗಿತ್ತು. ದುರದೃಷ್ಟವಶಾತ್ ಅದು ಹಾಗೆ ಆಗಲಿಲ್ಲ. ಈಗ ಮಾಹಿತಿಯ ಹರಿವನ್ನು ಬಿಗಿಯಾಗಿ ನಿಯಂತ್ರಿಸಲಾಗಿದ್ದು,ಏನನ್ನು ನಂಬಬೇಕು ಎಂದು ಗೊತ್ತಾಗುವುದೇ ಕಷ್ಟವಾಗಿದೆ.

*ಅಧಿಕಾರದಲ್ಲಿ ಇರುವವರು ಮಾಹಿತಿಯನ್ನು ನಿಯಂತ್ರಿಸುವ ಸಮಾಜದಲ್ಲಿ ವಿಜ್ಞಾನವು ಮುಂದುವರಿಯಲು ಸಾಧ್ಯವಿಲ್ಲ. ವಿಜ್ಞಾನಿಗಳನ್ನು ಮೌನವಾಗಿಸಿದರೆ ಪಿತೂರಿ ಸಿದ್ಧಾಂತಗಳು ಹುಲುಸಾಗಿ ಬೆಳೆಯಲು ಅವಕಾಶವಾಗುತ್ತದೆ ಮತ್ತು ಜನರು ಹಾಗೂ ಪ್ರಾಣಿಗಳು ಅನಗತ್ಯವಾಗಿ ಬಳಲುವಂತಾಗುತ್ತದೆ. ಎದುರಿಸಲು ಕಷ್ಟವಾದರೂ ಸತ್ಯವೆಂದಿಗೂ ಸತ್ಯವೇ;ತಮ್ಮ ಬಳಿ ಎಲ್ಲ ಪ್ರಶ್ನೆಗಳಿಗೂ ಉತ್ತರಗಳಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ಅಧಿಕಾರಿಗಳು ಬಯಸುವುದಿಲ್ಲ,ಅಷ್ಟೇ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News