ಜಾತ್ಯತೀತ ನಾಗರಿಕ ಸಂಹಿತೆ ಸ್ವೀಕಾರಾರ್ಹವಲ್ಲ : ಮುಸ್ಲಿಂ ಕಾನೂನು ಮಂಡಳಿ
ಹೊಸದಿಲ್ಲಿ : ಸ್ವಾತಂತ್ರ್ಯ ದಿನಾಚರಣೆಯಂದ ಪ್ರಧಾನಿ ನರೇಂದ್ರ ಮೋದಿ ಅವರು ಜಾತ್ಯತೀತ ನಾಗರಿಕ ಸಂಹಿತೆಗೆ ಕರೆ ನೀಡಿರುವುದು ಹಾಗೂ ಧಾರ್ಮಿಕ ವೈಯುಕ್ತಿಕ ಕಾನೂನುಗಳನ್ನು ಕೋಮುವಾದಿ ಎಂದು ವ್ಯಾಖ್ಯಾನಿಸಿರುವುದು ಆಕ್ಷೇಪಾರ್ಹ ಎಂದು ಅಖಿಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ ಪ್ರತಿಪಾದಿಸಿದೆ.
ಮುಸ್ಲಿಮರು ಶರಿಯಾ ಕಾನೂನಿನಲ್ಲಿ (ಮುಸ್ಲಿಂ ವೈಯುಕ್ತಿಕ ಕಾನೂನು )ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಆದುದರಿಂದ ಇದು ಎಂದಿಗೂ ಸ್ವೀಕಾರಾರ್ಹವಲ್ಲ ಎಂದು ಮಂಡಳಿ ಸ್ಪಷ್ಟವಾಗಿ ಹೇಳಿದೆ.
ಅಖಿಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿಯ ವಕ್ತಾರ ಡಾ. ಎಸ್.ಕ್ಯು.ಆರ್. ಇಲ್ಯಾಸ್ ಪತ್ರಿಕಾ ಹೇಳಿಕೆಯಲ್ಲಿ, ಧರ್ಮಾಧರಿತ ವೈಯುಕ್ತಿಕ ಕಾನೂನುಗಳಿಗೆ ಕೋಮವಾದಿ ಎಂದು ಹಣೆ ಪಟ್ಟಿ ಹಚ್ಚುವ ಹಾಗೂ ಇದಕ್ಕೆ ಬದಲು ಜಾತ್ಯತೀತ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಪ್ರಧಾನಿ ಅವರ ಹೇಳಿಕೆಗೆ ಆಘಾತ ವ್ಯಕ್ತಪಡಿಸಿದ್ದಾರೆ.
ತಮ್ಮ ಕೌಟುಂಬಿಕ ನಾನೂನು ಶರಿಯಾವನ್ನು ಆಧರಿಸಿರುವುದನ್ನು ಭಾರತೀಯ ಮುಸ್ಲಿಮರು ಮತ್ತೆ ಮತ್ತೆ ಸ್ಪಷ್ಟಪಡಿಸಿದ್ದಾರೆ. ಇದರಿಂದ ಯಾವುದೇ ಮುಸ್ಲಿಮರು ಯಾವುದೇ ಸಂದರ್ಭದಲ್ಲಿ ವಿಮುಖರಾಗಲು ಸಾಧ್ಯವಿಲ್ಲ. ದೇಶದ ಶಾಸನ ಸಭೆ ಶರಿಯತ್ ಅನುಷ್ಠಾನ ಕಾಯ್ದೆ, 1937ನ್ನು ಅನುಮೋದಿಸಿದೆ. ಭಾರತದ ಸಂವಿಧಾನದ ಕಲಂ 25ರ ಅಡಿಯಲ್ಲಿ ಧರ್ಮವನ್ನು ಪ್ರತಿಪಾದಿಸುವುದು, ಪ್ರಚಾರ ಮಾಡುವುದು ಹಾಗೂ ಅನುಸರಿಸುವುದನ್ನು ಮೂಲಭೂತ ಹಕ್ಕು ಎಂದು ಘೋಷಿಸಿದೆ ಎಂದು ಮಂಡಳಿ ಒತ್ತಿ ಹೇಳಿದೆ.
ಇತರ ಸಮುದಾಯಗಳ ಕೌಟುಂಬಿಕ ಕಾನೂನು ಕೂಡ ತಮ್ಮ ಧಾರ್ಮಿಕ ಹಾಗೂ ಪ್ರಾಚೀನ ಸಂಪ್ರದಾಯಗಳನ್ನು ಆಧಾರವಾಗಿ ಹೊಂದಿದೆ. ಆದುದರಿಂದ ಈ ಕಾನೂನುಗಳನ್ನು ತಿದ್ದುವುದು ಹಾಗೂ ಎಲ್ಲರಿಗೂ ಒಂದೇ ಜಾತ್ಯತೀತ ಸಂಹಿತೆಯನ್ನು ರಚಿಸುವುದು ಮೂಲಭೂತವಾಗಿ ಧರ್ಮದ ನಿರಾಕರಣೆ ಹಾಗೂ ಪಶ್ಚಿಮದ ಅನುಕರಣೆ ಎಂದು ಇಲ್ಯಾಸ್ ಹೇಳಿದ್ದಾರೆ.