ಆನಂದ್ ತೇಲ್ತುಂಬ್ಡೆಗೆ ಕರ್ನಾಟಕ ಸರ್ಕಾರದ ಬಸವ ಪ್ರಶಸ್ತಿ ಕುರಿತು ಭೀಮಾ ಕೋರೆಗಾಂವ್ ಪ್ರಕರಣದ ಸಹ ಆರೋಪಿಗಳಿಂದ ಜೈಲಿನಿಂದ ಪತ್ರ
ಹೊಸದಿಲ್ಲಿ: ಕರ್ನಾಟಕ ಸರ್ಕಾರ ನೀಡಿದ ಬಸವ ಪ್ರಶಸ್ತಿಯನ್ನು ಪಡೆದ ಹೋರಾಟಗಾರ ಹಾಗೂ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳಲ್ಲೊಬ್ಬರಾದ ಆನಂದ್ ತೇಲ್ತುಂಬ್ಡೆ ಅವರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಜೈಲಿನಲ್ಲಿರುವ ಇತರ ಏಳು ಆರೋಪಿಗಳು ಅಭಿನಂದಿಸಿದ್ದಾರೆ. ಜಾತಿ ವ್ಯವಸ್ಥೆಯ ನಿರ್ಮೂಲನೆಗಾಗಿ ಪ್ರಜಾಸತ್ತಾತ್ಮಕ ಕ್ರಾಂತಿಯ ಚಕ್ರವನ್ನು ಮುನ್ನಡೆಸುತ್ತಿರುವುದಕ್ಕಾಗಿಯೂ ಅವರು ಆನಂದ್ ತೇಲ್ತುಂಬ್ಡೆ ಅವರನ್ನು ಅಭಿನಂದಿಸಿದ್ದಾರೆ.
ಅವರಿಗೆ ದೊರೆತ ಈ ಪ್ರಶಸ್ತಿಯು “ಕತ್ತಲಿನಿಂದ ತುಂಬಿದ ಈಗಿನ ಯುಗದಲ್ಲಿನ ಬೆಳಕಿನ ಕಿರು ರೇಖೆಯಂತೆ ಕಾಣಿಸುತ್ತದೆ,” ಎಂದು ಪತ್ರದಲ್ಲಿ ಹೇಳಲಾಗಿದೆ.
ಹನ್ನೆರಡನೇ ಶತಮಾನದ ಸಮಾಜ ಸುಧಾರಕ ಬಸವಣ್ಣ ಅವರ ನೆನಪಿನಲ್ಲಿ ನೀಡಲಾಗುವ ಈ ಪ್ರಶಸ್ತಿಯನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆನಂದ್ ತೇಲ್ತುಂಬ್ಡೆ ಅವರಿಗೆ ನೀಡಿದರು.
“ಅಸ್ತಿತ್ವದಲ್ಲಿರುವ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆ ತರಲು ಪ್ರಾಮಾಣಿಕವಾಗಿ ಬಯಸುವವರು ನಿಮ್ಮ ವಿಶ್ಲೇಷಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಮತ್ತು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಯಸಿದವರು ನಿಮ್ಮ ವ್ಯಕ್ತಿತ್ವಕ್ಕೆ ವಿವಿಧ ಮೊಹರು ಮತ್ತು ಹಣೆಪಟ್ಟಿಗಳನ್ನು ಅಂಟಿಸಿದರು,” ಎಂದು ತೇಲ್ತುಂಬ್ಡೆ ಅವರಿಗೆ ಬರೆದ ಪತ್ರದಲ್ಲಿ ಇತರ ಬಂಧಿತರು ಹೇಳಿದ್ದಾರೆ.
ಜಾತಿ ವ್ಯವಸ್ಥೆ ಎಂಬ ರೋಗವನ್ನು ಬಯಲುಗೊಳಿಸಿದ್ದಕ್ಕಾಗಿ ಮತ್ತು ಈ ವ್ಯವಸ್ಥೆಯ ನಿರ್ಮೂಲನಕ್ಕಾಗಿ ಒಂದು ದಾರಿ ತೋರಿಸಿಕೊಟ್ಟಿದ್ದು ಶ್ಲಾಘನೀಯ ಎಂದು ಪತ್ರದಲ್ಲಿ ಹೇಳಲಾಗಿದೆ.
“ನಿಮ್ಮ ಮೇಲಿನ ದಾಳಿಗಳ ಹೊರತಾಗಿಯೂ ನಿಮ್ಮ ಮಾತು ಹಾಗೂ ಕೃತಿಗಳು ಅಚಲವಾಗಿದ್ದವು. ನಿಮ್ಮ ಮಾತುಗಳನ್ನು ದಮನಿಸುವುದು ಅಸಾಧ್ಯ. ಅವುಗಳು ಇನ್ನಷ್ಟು ತೀಕ್ಷ್ಣ, ದೃಢ ಮತ್ತು ನಿರ್ಭೀತವಾಗಿದ್ದವು,” ಎಂದು ಪತ್ರದಲ್ಲಿ ಹೇಳಲಾಗಿದೆ.
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ತೇಲ್ತುಂಬ್ಡೆ ಅವರಿಗೆ ನವೆಂಬರ್ 2022 ರಲ್ಲಿ ಜಾಮೀನು ದೊರಕಿತ್ತು.