ಬಿಜೆಪಿ ಅನುಕೂಲಕ್ಕೆಂದೇ ಏಳು ಹಂತದ ಮತದಾನ : ಚುನಾವಣಾ ಆಯೋಗದ ವಿರುದ್ಧ ಮಮತಾ ಬ್ಯಾನರ್ಜಿ ಆರೋಪ
ಮಾಲ್ಡಾ : ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಂಪುಟ ಸಹದ್ಯೋಗಿಗಳು ದೇಶದ ಸಂಪನ್ಮೂಲಗಳನ್ನು ಬಳಸಿಕೊಂಡು ವ್ಯಾಪಕವಾಗಿ ಚುನಾವಣಾ ಪ್ರಚಾರವನ್ನು ನಡೆಸುವುದಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದಲೇ ಭಾರತೀಯ ಚುನಾವಣಾ ಆಯೋಗವು ಲೋಕಸಭಾ ಚುನಾವಣೆಗೆ ಏಳು ಹಂತದ ಮತದಾನವನ್ನು ರೂಪಿಸಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಆರೋಪಿಸಿದ್ದಾರೆ.
ಮಾಲ್ಡಾ ಉತ್ತರ ಕ್ಷೇತ್ರದ ಟಿಎಂಸಿ ಅಭ್ಯರ್ಥಿ, ಮಾಜಿ ಐಪಿಎಸ್ ಅಧಿಕಾರಿ ಪ್ರಸೂನ್ ಬ್ಯಾನರ್ಜಿ ಅವರ ಬೆಂಬಲವಾಗಿ ಗಜೋಲ್ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ‘‘ಲೋಕಸಭಾ ಚುನಾವಣೆ ಎ.19ರಿಂದ ಜೂನ್ 1ರವರೆಗೆ ನಡೆಯಲಿವೆ. ಪ್ರತಿಪಕ್ಷಗಳನ್ನು ಮೀರಿಸುವ ಉದ್ದೇಶದಿಂದ ಮೋದಿ ಹಾಗೂ ಅವರ ಸಂಪುಟ ಸಹದ್ಯೋಗಿಗಳು ವಿಶೇಷ ವಿಮಾನಗಳ ಮೂಲಕ ದೇಶಾದ್ಯಂತ ಪ್ರಯಾಣಿಸುವುದಕ್ಕೆ ಇದರಿಂದ ಸಾಧ್ಯವಾಗಲಿದೆ’’ ಎಂದು ಮಮತಾ ಆಪಾದಿಸಿದು.
‘‘ಈ ಹಿಂದಿನ ಸಂದರ್ಭಗಳಲ್ಲಿ ಚುನಾವಣೆಯು ಮೇ ತಿಂಗಳೊಳಗೆ ಮುಕ್ತಾಯಗೊಳ್ಳುತ್ತಿತ್ತು. ಆದರೆ ಈ ಬಾರಿ ಮೋದಿ ಅವರು ಸೇನಾ ವಿಮಾನದಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡುವಂತೆ ಮಾಡಲು ಅದನ್ನು ಜೂನ್ 1ರವರೆಗೆ ವಿಸ್ತರಿಸಲಾಗಿದೆ. ಆದರೆ ಪ್ರತಿಪಕ್ಷಗಳು ಹೆಲಿಕಾಪ್ಟರ್ಗಳು ಸೇರಿದಂತೆ ಸ್ವಂತ ಸಾರಿಗೆ ಸೌಲಭ್ಯಗಳ ಏರ್ಪಾಡನ್ನು ಮಾಡಿಕೊಳ್ಳಬೇಕಾಗಿದೆ. ಆದರೆ ಅವುಗಳನ್ನು ಕೂಡಾ ಬಿಜೆಪಿ ನಾಯಕರು ಮುಂಗಡವಾಗಿ ಕಾದಿರಿಸಿದ್ದಾರೆ. ಹೀಗಾಗಿ ನಮಗೆ ಸ್ಪಲ್ಪ ಅವಕಾಶವಷ್ಟೇ ದೊರೆತಿದೆ’’ ಎಂದು ಮಮತಾ ಆಪಾದಿಸಿದರು.
ಜನತೆ ಸುಡುಬಿಸಿಲಿನ ತಾಪದಿಂದ ಬಳಲುತ್ತಿದ್ದಾರೆ. ಆದರೆ ಮೋದಿ ಹಾಗೂ ಬಿಜೆಪಿ ನಾಯಕರು ಸಕಲ ಐಶಾರಾಮಿ ವಿವಿಐಪಿ ಸೌಲಭ್ಯಗಳೊಂದಿಗೆ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ ಎಂದು ಬ್ಯಾನರ್ಜಿ ಆಪಾದಿಸಿದರು.
ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟವು ಹಂಗಾಮಿ ಸಂಪುಟವೆನಿಸುತ್ತದೆ ಮತ್ತು ಆಡಳಿತ ಯಂತ್ರವನ್ನು ನಡೆಸುವ ಉಸ್ತುವಾರಿಯನ್ನು ಚುನಾವಣಾ ಆಯೋಗ ವಹಿಸುತ್ತದೆ. ಆದರೆ ಈಗ ಚುನಾವಣಾ ಆಯೋಗವು ಮೋದಿ ಹಾಗೂ ಅವರ ಸಂಪುಟ ಸಹದ್ಯೋಗಿಗಳ ಅಣತಿಯಂತೆ ನಡೆದುಕೊಳ್ಳುತ್ತಿದೆ ಎಂದು ಆಪಾದಿಸಿದರು.
ಮೋದಿ ಸರಕಾರದ ದುಷ್ಕೃತ್ಯಗಳನ್ನು ಹಾಗೂ ಬೃಹತ್ ಉದ್ಯಮ ಸಂಸ್ಥೆಗಳ ಜೊತೆ ಅದಕ್ಕಿರುವ ನಿಕಟ ನಂಟನ್ನು ಅನಾವರಣಗೊಳಿಸಿದ್ದಕ್ಕಾಗಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸಂಸತ್ನಿಂದ ಉಚ್ಛಾಟಿಸಲಾಯಿತು. ಪ್ರತೀಕಾರ ಮನೋಭಾವದ ಈ ಸರಕಾರವು ಟಿಎಂಸಿಯ ಹಲವು ಸಂಸದರನ್ನು ಗುರಿಯಾಗಿಸಿದೆ ಎಂದು ಮಮತಾ ಹೇಳಿದರು.