ಶಿವಾಜಿ ಪ್ರತಿಮೆಯ ಶಿಲ್ಪಿಗೆ ಆರೆಸ್ಸೆಸ್ ಸಂಪರ್ಕ : ಕಾಂಗ್ರೆಸ್ ಮುಖಂಡ ಪಟೋಲೆ ಆರೋಪ
ಮುಂಬೈ : ಮಹಾರಾಷ್ಟ್ರದ ಮಾಲ್ವಾನ್‌ನ ರಾಜ್‌ಕೋಟ್ ಕೋಟೆಯಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ ನಿರ್ಮಿಸಿದ ಶಿಲ್ಪಿಗೆ ಆರೆಸ್ಸೆಸ್ ಸಂಪರ್ಕವಿದೆ ಎಂದು ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಹೇಳಿದ್ದಾರೆ.
ಅದನ್ನು ನಿರ್ಮಿಸಿದ ಶಿಲ್ಪಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಗೆ ಆಪ್ತರು ಎಂದು ಹೇಳಿದ್ದಾರೆ.
ನಾಗಪುರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ, "ಕಲಾವಿದ ಜಯದೀಪ್ ಆಪ್ಟೆ ಅವರಿಗೆ ಅಷ್ಟು ದೊಡ್ಡ ಪ್ರಮಾಣದ ಪ್ರತಿಮೆಯನ್ನು ತಯಾರಿಸಿದ ಅನುಭವವಿಲ್ಲ. ಆಪ್ಟೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಸಂಬಂಧ ಹೊಂದಿದ್ದಾರೆ" ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಮಾಲ್ವಾನ್‌ನ ರಾಜ್‌ಕೋಟ್ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಕುಸಿದ ಬಳಿಕ ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿ ಎದ್ದಿದೆ.
ಈ ಆರೋಪಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂತಿವಾರ್ ಅವರು, ಶಿವಾಜಿ ಪ್ರತಿಮೆ ನಿರ್ಮಿಸಿದ ಶಿಲ್ಪಿಗೆ ವಾಸ್ತವವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಹತ್ತಿರವಾಗಿದ್ದಾರೆ ಎಂದು ಯಾರೋ ಹೇಳಿದರು. ಈ ಮಾಹಿತಿಯನ್ನು ಪರಿಶೀಲನೆ ನಡೆಸಬೇಕು ಎಂದು ವ್ಯಂಗ್ಯವಾಡಿದ್ದಾರೆ.
17ನೇ ಶತಮಾನದ ಮರಾಠಾ ಸಾಮ್ರಾಜ್ಯದ ಸ್ಥಾಪಕ ಶಿವಾಜಿಯ 35 ಅಡಿ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ ಸುಮಾರು ಒಂಭತ್ತು ತಿಂಗಳ ನಂತರ ಆಗಸ್ಟ್ 26 ರಂದು ಪ್ರತಿಮೆ ಕುಸಿದು ಬಿದ್ದಿದೆ.
ಘಟನೆಗೆ ಸಂಬಂಧಿಸಿದಂತೆ ಸಿಂಧುದುರ್ಗ ಪೊಲೀಸರು ಆಪ್ಟೆ ಮತ್ತು ಸ್ಟ್ರಕ್ಚರಲ್ ಎಂಜಿನಿಯರ್ ಚೇತನ್ ಪಾಟೀಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.