ನಾನು ದಲಿತನಾಗಿರುವುದರಿಂದ ಸಂಸತ್ತಿನಲ್ಲಿ ಮಾತನಾಡಲು ನನಗೆ ಅವಕಾಶ ನೀಡುತ್ತಿಲ್ಲ ಎಂದು ನಾನು ಹೇಳಬೇಕೇ?: ಮಲ್ಲಿಕಾರ್ಜುನ ಖರ್ಗೆ

Update: 2023-12-20 10:45 GMT

ಮಲ್ಲಿಕಾರ್ಜುನ ಖರ್ಗೆ (PTI)

ಹೊಸದಿಲ್ಲಿ: ಉಪರಾಷ್ಟ್ರಪತಿ ಜಗದೀಪ ಧನ್ಕರ್ ಅವರ ಮಿಮಿಕ್ರಿ ಕುರಿತು ವಿವಾದದ ನಡುವೆಯೇ,ಪ್ರತಿಯೊಂದೂ ವಿಷಯದಲ್ಲಿ ಜಾತಿಯನ್ನು ಎಳೆದು ತರಬಾರದು ಎಂದು ಬುಧವಾರ ಇಲ್ಲಿ ಹೇಳಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ರಾಜ್ಯಸಭೆಯಲ್ಲಿ ತನಗೆ ಮಾತನಾಡಲು ಅವಕಾಶ ನಿರಾಕರಿಸಿದಾಗ ಪ್ರತಿ ಬಾರಿಯೂ ತಾನು ತನ್ನ ದಲಿತ ಮೂಲವನ್ನು ಎತ್ತಬೇಕೇ ಎಂದು ಪ್ರಶ್ನಿಸಿದರು.

ಸಂಸದರ ಅಮಾನತುಗಳನ್ನು ವಿರೋಧಿಸಿ ಸಂಸತ್ತಿನ ಹೊರಗೆ ಪ್ರತಿಪಕ್ಷಗಳ ಪ್ರತಿಭಟನೆ ಸಂದರ್ಭ ಟಿಎಂಸಿ ಸಂಸದ ಕಲ್ಯಾಣ ಬ್ಯಾನರ್ಜಿಯವರು ರಾಜ್ಯಸಭೆಯ ಸಭಾಪತಿಗಳೂ ಆಗಿರುವ ಧನ್ಕರ್ ಅವರ ಅನುಕರಣೆಯನ್ನು ಮಾಡಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಧನ್ಕರ್, ಇದು ರೈತನಾಗಿ ಮತ್ತು ಜಾಟ್ ಆಗಿ ತನ್ನ ಹಿನ್ನೆಲೆಗೆ ಮಾಡಲಾಗಿರುವ ಅವಮಾನವಾಗಿದೆ ಎಂದು ಕಿಡಿಕಾರಿದ್ದರು. ಬಿಜೆಪಿಯೂ ಇದನ್ನೇ ಪ್ರತಿಧ್ವನಿಸಿತ್ತು. ಧನ್ಕರ್ ಜಾಟ್ ಸಮುದಾಯಕ್ಕೆ ಸೇರಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ‘ಇತರ ಸದಸ್ಯರಿಗೆ ರಕ್ಷಣೆ ನೀಡುವುದು ಸಭಾಪತಿಗಳ ಕೆಲಸವಾಗಿದೆ, ಆದರೆ ಅವರೇ ಇಂತಹ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಲು ನನಗೆ ಆಗಾಗ್ಗೆ ಅವಕಾಶ ನೀಡಲಾಗುತ್ತಿಲ್ಲ, ನಾನು ದಲಿತನಾಗಿರುವುದು ಇದಕ್ಕೆ ಕಾರಣ ಎಂದು ನಾನು ಹೇಳಬೇಕೇ? ಅವರು ಸಂಸತ್ತಿನೊಳಗೆ ಜಾತಿಯ ಕುರಿತು ಮಾತನಾಡಿ ಅದರ ಹೆಸರಿನಲ್ಲಿ ಹೊರಗಿರುವ ಜನರನ್ನು ಪ್ರಚೋದಿಸಬಾರದು’ ಎಂದು ಹೇಳಿದರು.

ಸಾಂವಿಧಾನಿಕ ಹುದ್ದೆಗಳಲ್ಲಿರುವವರು ತಮ್ಮ ಜಾತಿಗಳ ಕುರಿತು ಮಾತನಾಡಿದಾಗ ಅದು ದೇಶಕ್ಕೆ ಅತ್ಯಂತ ದುಃಖದ ದಿನವಾಗುತ್ತದೆ ಎಂದು ಹೇಳಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ಞ ಚೌಧುರಿಯವರು, ಇಂತಹ ವಿಷಯಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಸರಕಾರವು ಸಂಸತ್ ಭದ್ರತಾ ಲೋಪ ವಿಷಯದಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ. ಈಗ ಪ್ರತಿಯೊಬ್ಬರೂ ತಮ್ಮ ಜಾತಿಯನ್ನು ಘೋಷಿಸುವ ಹಣೆಪಟ್ಟಿಯನ್ನು ಅಂಟಿಸಿಕೊಂಡು ತಿರುಗಾಡಬೇಕೇ ಎಂದು ಪ್ರಶ್ನಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News