ಪ್ರಜಾಪ್ರಭುತ್ವದ ತಾಯಿಯಲ್ಲ, ಸರ್ವಾಧಿಕಾರದ ತಂದೆ: ಕೇಂದ್ರ ಸರಕಾರಕ್ಕೆ ಸಿಬಲ್ ತರಾಟೆ

Update: 2025-04-13 20:43 IST
ಪ್ರಜಾಪ್ರಭುತ್ವದ ತಾಯಿಯಲ್ಲ, ಸರ್ವಾಧಿಕಾರದ ತಂದೆ: ಕೇಂದ್ರ ಸರಕಾರಕ್ಕೆ ಸಿಬಲ್ ತರಾಟೆ

 ಕಪಿಲ್ ಸಿಬಲ್ | PC : PTI 

  • whatsapp icon

ಹೊಸದಿಲ್ಲಿ: ಕೇಂದ್ರ ಸರಕಾರವು ಕಾಂಗ್ರೆಸನ್ನು ನಿಷ್ಕ್ರಿಯಗೊಳಿಸಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ರವಿವಾರ ಇಲ್ಲಿ ಆರೋಪಿಸಿದ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು, ಜಾರಿ ನಿರ್ದೇಶನಾಲಯ(ಈಡಿ)ವು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸ್ಥಿರಾಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳಲು ನೋಟಿಸ್‌ ಗಳನ್ನು ಹೊರಡಿಸಿರುವುದನ್ನು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಬಣ್ಣಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಬಲ್, ‘ಬಾಯಿಮಾತಿನಲ್ಲಿ ನಾವು ಪ್ರಜಾಪ್ರಭುತ್ವದ ತಾಯಿ, ಆದರೆ ವಾಸ್ತವದಲ್ಲಿ ನೀವು ಸರ್ವಾಧಿಕಾರದ ತಂದೆಯಾಗಿದ್ದೀರಿ. ಅವರು(ಬಿಜೆಪಿ) ಹಿಂದು-ಮುಸ್ಲಿಮ್ ಅಜೆಂಡಾ ಇಟ್ಟುಕೊಂಡು ತಮ್ಮ ರಾಜಕೀಯವನ್ನು ಮಾಡಲು ಮತ್ತು ವಿರೋಧ ಪಕ್ಷವನ್ನು ಮುಗಿಸಲು ಬಯಸಿದ್ದಾರೆ’ ಎಂದು ಹೇಳಿದರು.

ಕಾಂಗ್ರೆಸ್ ನಿಯಂತ್ರಿತ ನ್ಯಾಷನಲ್ ಹೆರಾಲ್ಡ್ ಮತ್ತು ಅಸೋಸಿಯೇಟೆಡ್ ಜರ್ನಲ್ಸ್ ಲಿ.ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ತಾನು ಜಪ್ತಿ ಮಾಡಿರುವ ದಿಲ್ಲಿ, ಮುಂಬೈ ಮತ್ತು ಲಕ್ನೋಗಳಲ್ಲಿಯ 661 ಕೋ.ರೂ.ಮೌಲ್ಯದ ಸ್ಥಿರಾಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಈಡಿ ನೋಟಿಸ್‌ಗಳನ್ನು ಹೊರಡಿಸಿರುವ ಹಿನ್ನೆಲೆಯಲ್ಲಿ ಸಿಬಲ್ ಹೇಳಿಕೆಗಳು ಹೊರಬಿದ್ದಿವೆ.

ಕಾಂಗ್ರೆಸನ್ನು ನಿಷ್ಕ್ರಿಯಗೊಳಿಸುವುದು ಪಕ್ಷದ ಕಚೇರಿಗಳಿರುವ ಪತ್ರಿಕೆಯ ಈ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳಲು ನೋಟಿಸ್‌ ನ ಉದ್ದೇಶವಾಗಿದೆ ಎಂದು ಹೇಳಿದ ಸಿಬಲ್, ‘ನನಗೆ ತಿಳಿದಿರುವಂತೆ ಕಾಂಗ್ರೆಸ್ ಬಳಿ ಹೆಚ್ಚು ಹಣವಿಲ್ಲ,ಹೀಗಾಗಿ ಅದರ ಕಚೇರಿಗಳಿರುವ ಕಟ್ಟಡಗಳನ್ನು ಸ್ವಾಧೀನ ಪಡಿಸಿಕೊಂಡರೆ ಅದು ಕಚೇರಿಯೇ ಇಲ್ಲದೆ ರಾಜಕೀಯ ಪಕ್ಷವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ,ಇದು ಈ ಸರಕಾರದ ಮನಃಸ್ಥಿತಿಯನ್ನು ಪ್ರತಿಬಿಂಬಿಸುವ ದುರದೃಷ್ಟಕರ ಘಟನೆಯಾಗಿದೆ ಎಂದರು.

ಇದು ವಿರೋಧ ಪಕ್ಷಗಳನ್ನು ನಾಶಗೊಳಿಸಲು ಈ.ಡಿ.ಯಂತಹ ಸಂಸ್ಥೆಗಳನ್ನು ಬಳಸುವ ಸರಕಾರದ ಚಿಲ್ಲರೆ ಬುದ್ಧಿಯನ್ನು ಪ್ರತಿಬಿಂಬಿಸುತ್ತದೆ ಎಂದು ಕಿಡಿಕಾರಿದ ಸಿಬಲ್, ಅವರು ಪ್ರತಿಪಕ್ಷದಲ್ಲಿರುವ ಎಲ್ಲರನ್ನೂ ತಮ್ಮ ಸಂಪುಟಗಳಿಗೆ ಸೇರಿಸಿಕೊಳ್ಳುತ್ತಾರೆ. ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡುತ್ತಾರೆ. ಅವರಿಗೆ ರಾಜ್ಯಗಳಲ್ಲಿ ಸಂಪುಟ ಹುದ್ದೆಗಳನ್ನು ನೀಡುತ್ತಾರೆ. ತಾವು ಯಾರ ವಿರುದ್ಧ ವಂಚನೆ ಮತ್ತು ಭ್ರಷ್ಟಾಚಾರ ಆರೋಪಗಳನ್ನು ಮಾಡಿದ್ದೇವೆಯೋ ಅವರನ್ನು ಸೇರಿಸಿಕೊಳ್ಳುತ್ತಾರೆ. ಆಗ ಈಡಿ ಇರುವುದೇ ಇಲ್ಲ ಎಂದು ಬಿಜೆಪಿಯನ್ನು ಟೀಕಿಸಿದರು.

ವಿವಿಧ ರಾಜ್ಯಗಳ ಕಾಂಗ್ರೆಸ್ ಮುಖ್ಯಮಂತ್ರಿಗಳು ಸೇರಿದಂತೆ ತನ್ನ ರಾಜಕೀಯ ವಿರೋಧಿಗಳಿಗೆ ತೊಂದರೆ ನೀಡಲು ಬಿಜೆಪಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಸಿಬಲ್, ಸಿಬಿಐ ರಾಜ್ಯವನ್ನು ಪ್ರವೇಶಿಸಲು ರಾಜ್ಯ ಸರಕಾರದ ಒಪ್ಪಿಗೆ ಅಥವಾ ನ್ಯಾಯಾಲಯದ ಆದೇಶವನ್ನು ಹೊಂದಿರಬೇಕು. ಆದರೆ ಈ.ಡಿ.ದೇಶಾದ್ಯಂತ ಎಲ್ಲಿ ಬೇಕಾದರೂ ಹೋಗಬಹುದು. ಹೀಗಾಗಿ ಸರಕಾರಗಳನ್ನು ಅಸ್ಥಿರಗೊಳಿಸಲು ಅವರು ಈಡಿಯನ್ನು ಬಳಸುತ್ತಿದ್ದಾರೆ.ಹೇಮಂತ ಸೊರೇನ್ ಪ್ರಕರಣದಲ್ಲಿ ಇದು ನಡೆದಿದೆ. ಅವರು ಸಿದ್ದರಾಮಯ್ಯ ವಿರುದ್ಧವೂ ಈ ತಂತ್ರವನ್ನು ಪ್ರಯತ್ನಿಸಿದ್ದರು,ಆದರೆ ಯಶಸ್ವಿಯಾಗಲಿಲ್ಲ ಎಂದರು.

ಪಿ.ಚಿದಂಬರಂ ಪ್ರಕರಣದಲ್ಲಿ ಈಡಿ ಅವರನ್ನು ಬಂಧಿಸಿತ್ತು ಮತ್ತು ಅವರು ವಿದೇಶದಲ್ಲಿ ಆಸ್ತಿಗಳನ್ನು ಹೊಂದಿದ್ದಾರೆ ಎಂದು ನ್ಯಾಯಾಲಯಕ್ಕೆ ಹೇಳುತ್ತಲೇ ಇತ್ತು. ಎಷ್ಟೊಂದು ವರ್ಷಗಳು ಕಳೆದು ಹೋದವು? ನೀವು ಓರ್ವ ವ್ಯಕ್ತಿಯನ್ನು, ಪಕ್ಷದ ವರ್ಚಸ್ಸನ್ನು ನಾಶ ಮಾಡಿದ್ದೀರಿ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿಯೂ ನಿಖರವಾಗಿ ಇದೇ ಆಗುತ್ತಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News