ಉದ್ಯೋಗ, ಕೌಶಲ್ಯ ಅಭಿವೃದ್ಧಿಗೆ ‘ಸ್ಕಿಲ್ ಇಂಡಿಯಾ’: ಕೇಂದ್ರ ಸರಕಾರದಿಂದ ಅತ್ಯಾಧುನಿಕ ಡಿಜಿಟಲ್ ಆ್ಯಪ್ ಅನಾವರಣ

Update: 2023-09-14 15:33 GMT

Skill India Digital app | Photo Credit: skillindiadigital.gov.in

ಹೊಸದಿಲ್ಲಿ: ಸ್ಕಿಲ್ ಇಂಡಿಯಾ ಡಿಜಿಟಲ್ ಆ್ಯಪ್ ಅನ್ನು ಕೇಂದ್ರ ಸರಕಾರ ಬುಧವಾರ ಅನಾವರಣಗೊಳಿಸಿದೆ. ಉದ್ಯೋಗ ಕೌಶಲ್ಯಾಭಿವೃದ್ದಿಯ ಎಲ್ಲಾ ಕೋರ್ಸ್ ಗಳನ್ನು ಹಾಗೂ ಉದ್ಯೋಗವಕಾಶಗಳನ್ನು ಒಂದೇ ಡಿಜಿಟಲ್ ಫ್ಲಾಟ್ ಫಾರಂನಲ್ಲಿ ತರಲು ಈ ಆ್ಯಪ್ ಸಹಕಾರಿಯಾಗಲಿದೆ.

ಸ್ಕಿಲ್ ಇಂಡಿಯಾ ಡಿಜಿಟಲ್ ವೇದಿಕೆಯನ್ನು ಬುಧವಾರ ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಬುಧವಾರ ಅನಾವರಣಗೊಳಿಸಿದರು.

ಎಲ್ಲಾ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳನ್ನು ಒಂದೇ ವೇದಿಕೆಯಲ್ಲಿ ತರಲು ಈ ಅತ್ಯಾಧುನಿಕ ಡಿಜಿಟಲ್ ಆ್ಯಪ್ ಸಹಕಾರಿಯಾಗಲಿದೆ ಎಂದರು. ಡಿಜಿಟಲ್ ತಂತ್ರಜ್ಞಾನದಲ್ಲಿ ಭಾರತವು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಡಿಜಿ ಲಾಕರ್, ಓಎನ್ಡಿಸಿ,ಡಿಬಿಟಿ, ಅಕಾಡಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ನಂತಹ ಉಪಕ್ರಗಮಗಳು ಜನರ ಜೀವನವನ್ನ ಸುಗಮಗೊಳಿಸಿವೆ. ಉತ್ಕೃಷ್ಟ ಗುಣಮಟ್ಟದ ಡಿಜಿಟಲ್ ಮೂಲಸೌಕರ್ಯ ನಿರ್ಮಾಣದಲ್ಲಿ ಭಾರತವು ಮುಂಚೂಣಿಯಲ್ಲಿದೆ ಎಂದರು..

ಕೋರ್ಸ್ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರಗಳನ್ನು ನೀಡಲು, ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಕೌಶಲ್ಯಾಭಿವೃದ್ಧಿಯ ಕೋರ್ಸ್ ಗಳನ್ನು ಪಡೆಯಲು ಇಚ್ಛಿಸುವವರಿಗೆ ಅರ್ಜಿ ಸಲ್ಲಿಕೆಗೆ ಬೇಕಾದ ಡಿಜಿಟಲ್ ಸ್ವಪರಿಚಯ (ಸಿವಿ)ಪತ್ರಗಳನ್ನು ಸೃಷ್ಟಿಸಲು ಅವಕಾಶ ಮಾಡಿಕೊಡುವುದಕಾಗಿ ಈ ಆ್ಯಪ್ ಅನ್ನು ಡಿಜಿಲಾಕರ್ ಹಾಗೂ ಆಧಾರ್ ಜೊತೆ ಲಿಂಕ್ ಮಾಡಲಾಗುವುದು.

ಸೂಕ್ಷ್ಮ, ಕಿರು ಹಾಗೂ ಮಧ್ಯಮ ಗಾತ್ರದ ಉದ್ಯಮಗಳ ನೋಂದಣಿಗೆ ನೆರವಾಗಲು ಉದ್ಯಮ್ ಪೋರ್ಟಲ್ ಜೊತೆಗೂ ಸ್ಕಿಲ್ ಇಂಡಿಯಾ ಡಿಜಿಟಲ್ ಅನ್ನು ಲಿಂಕ್ ಮಾಡಲಾಗುವುದು. ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್, ರಾಷ್ಟ್ರೀಯ ಉದ್ಯೋಗ ಸೇವೆ, ಉದ್ಯೋಗಾಕಾಂಕ್ಷಿಗಳಿಗಾಗಿ 2015ರಲ್ಲಿ ಸರಕಾರವು ಆರಂಭಿಸಿದ ಐದು ವರ್ಷಗಳ ಅವಧಿಯ ರಾಷ್ಟ್ರೀಯ ವೃತ್ತಿ ಸೇವೆ (ನ್ಯಾಶನಲ್ ಕ್ಯಾರಿಯರ್ ಸರ್ವಿಸ್) ಹಾಗೂ ‘ಅಸೀಮ್’ ಉದ್ಯೋಗ ಮಾರ್ಗದರ್ಶಿಕೆ (ಡೈರೆಕ್ಟರಿ)ಯ ಜೊತೆಗೂ ‘ಸ್ಕಿಲ್ ಇಂಡಿಯಾ’ ಡಿಜಿಟಲ್ ಅನ್ನು ಲಿಂಕ್ ಮಾಡಲಾಗುವುದು.

ಸಂಭಾವ್ಯ ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳನ್ನು ಒಂದೆಡೆ ತರಲು ಈ ಆ್ಯಪ್ ನೆರವಾಗಲಿದೆ ಎಂದು ಕೇಂದ್ರ ಮಾಹಿತಿತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ. ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮವು ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News