ಪೊಲೀಸ್ ಕಾನ್ಸ್‌ಟೇಬಲ್ ಗೆ ಕಪಾಳ ಮೋಕ್ಷ ; ಮಹಾರಾಷ್ಟ್ರದ ಬಿಜೆಪಿ ಶಾಸಕ ಸುನೀಲ್ ಕಾಬ್ಳೆ ವಿರುದ್ಧ ಪ್ರಕರಣ ದಾಖಲು
ಪುಣೆ: ಮಹಾರಾಷ್ಟ್ರದ ಪುಣೆ ನಗರದಲ್ಲಿ ಕರ್ತವ್ಯ ನಿರತ ಪೊಲೀಸ್ ಕಾನ್ಸ್‌ಟೇಬಲ್ ಓರ್ವರ ಕೆನ್ನೆಗೆ ಬಾರಿಸಿದ ಆರೋಪದಲ್ಲಿ ಇಲ್ಲಿನ ಬಿಜೆಪಿ ಶಾಸಕ ಸುನಿಲ್ ಕಾಂಬ್ಳೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪುಣೆ ಕಂಟೋನ್ಮೆಂಟ್ ಕ್ಷೇತ್ರದ ಶಾಸಕ ಸುನಿಲ್ ಕಾಂಬ್ಳೆ ಅವರು ಇಲ್ಲಿನ ಸಸೂನ್ ಜನರಲ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ಕಾನ್ಸ್‌ಟೇಬಲ್ ಕೆನ್ನೆಗೆ ಹೊಡೆದಿರುವ ಘಟನೆಯ ವೀಡಿಯೊ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಕಾನ್ಸ್‌ಟೇಬಲ್ ದಾಖಲಿಸಿದ ದೂರಿನ ಆಧಾರದಲ್ಲಿ ಕಾಂಬ್ಲೆ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಸೂನ್ ಜನರಲ್ ಆಸ್ಪತ್ರೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಕೂಡ ಪಾಲ್ಗೊಂಡಿದ್ದರು.
ವೀಡಿಯೊದಲ್ಲಿ ಕಾಂಬ್ಳೆ ಕಾರ್ಯಕ್ರಮ ಮುಗಿದ ಬಳಿಕ ಮೆಟ್ಟಿಲಲ್ಲಿ ಇಳಿಯುತ್ತಾ ಬರುತ್ತಿರುವುದು ಹಾಗೂ ಅದೇ ದಾರಿಯಲ್ಲಿ ಬಂದ ವ್ಯಕ್ತಿಯೊಬ್ಬನ ಕೆನ್ನೆಗೆ ಬಾರಿಸುವುದನ್ನು ಕಾಣಬಹುದು. ಆ ವ್ಯಕ್ತಿ ಬುಂಡ್ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜಿತನಾದ ಕಾನ್ಸ್‌ಟೇಬಲ್ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಆರೋಪವನ್ನು ನಿರಾಕರಿಸಿರುವ ಕಾಂಬ್ಳೆ, ‘‘ನಾನು ಯಾರೊಬ್ಬರಿಗೂ ಹಲ್ಲೆ ನಡೆಸಿಲ್ಲ. ನಾನು ಮೆಟ್ಟಿಲಲ್ಲಿ ಕೆಳಗೆ ಇಳಿಯುತ್ತಿರುವಾಗ ಅದೇ ದಾರಿಯಲ್ಲಿ ಕೆಲವರು ಬಂದರು. ನಾನು ಅವರನ್ನು ದೂಡಿದೆ ಹಾಗೂ ಮುಂದೆ ಸಾಗಿದೆ’’ ಎಂದಿದ್ದಾರೆ.