ಕೊಲಿಜಿಯಂ ನಿಂದ ಶಿಫಾರಸುಗೊಂಡ 2 ವರ್ಷ ಬಳಿಕ ಬಾಂಬೆ ಹೈಕೋರ್ಟಿಗೆ ಸೋಮಶೇಖರ್ ಸುಂದರೇಶನ್ ನೇಮಕ
ಮುಂಬೈ: ಸುಪ್ರೀಂ ಕೋರ್ಟ್ ಕೊಲಿಜಿಯಂ ನಿಂದ ಮೊದಲು ಶಿಫಾರಸುಗೊಂಡ ಸುಮಾರು ಎರಡು ವರ್ಷಗಳ ಬಳಿಕ, ವಕೀಲ ಸೋಮಶೇಖರ್ ಸುಂದರೇಶನ್ರನ್ನು ಬಾಂಬೆ ಹೈಕೋರ್ಟ್ ನ ನ್ಯಾಯಾಧೀಶರಾಗಿ ನೇಮಿಸಿ ಕೇಂದ್ರ ಸರಕಾರವು ಗುರುವಾರ ಅಧಿಸೂಚನೆ ಹೊರಡಿಸಿದೆ.
ಈ ವಿಷಯವನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪ್ರಕಟಿಸಿದ್ದಾರೆ.
ಕೊಲಿಜಿಯಂ 2021 ಅಕ್ಟೋಬರ್ ನಲ್ಲಿ ಸುಂದರೇಶನ್ ರ ಹೆಸರನ್ನು ಬಾಂಬೆ ಹೈಕೋರ್ಟ್ ನ್ಯಾಯಾಧೀಶ ಹುದ್ದೆಗೆ ಮೊದಲು ಶಿಫಾರಸು ಮಾಡಿತ್ತು. ಅದಕ್ಕೆ ಕೇಂದ್ರ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
2022 ಫೆ.16ರಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಮತ್ತೊಮ್ಮೆ ಅವರ ಹೆಸರನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿತು. ಅದಕ್ಕೆ 2022 ನ.25ರಂದು ಪ್ರತಿಕ್ರಿಯಿಸಿದ ಕೇಂದ್ರ ಸರಕಾರ, ಈ ಶಿಫಾರಸನ್ನು ಮರುಪರಿಶೀಲಿಸುವಂತೆ ಕೊಲಿಜಿಯಂಗೆ ಕೋರಿಕೆ ಸಲ್ಲಿಸಿತು. ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ವಿಷಯಗಳಲ್ಲಿ ಈ ವಕೀಲರು ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂಬ ಕಾರಣವನ್ನು ಸರಕಾರವು ನೀಡಿತು.
2023 ಜನವರಿಯಲ್ಲಿ, ಸುಪ್ರೀಂ ಕೋರ್ಟ್ ಕೊಲಿಜಿಯಂ ತನ್ನ ನಿಲುವನ್ನು ಪುನರುಚ್ಚರಿಸಿತು ಹಾಗೂ ಕೇಂದ್ರ ಸರಕಾರದ ಆಕ್ಷೇಪವನ್ನು ತಿರಸ್ಕರಿಸಿತು. ‘‘ಸುಂದರೇಶನ್ ವ್ಯಕ್ತಪಡಿಸಿದ ಅಭಿಪ್ರಾಯದ ಆಧಾರದಲ್ಲಿ, ಅವರೊಬ್ಬ ಪುರ್ವಾಗ್ರಹಪೀಡಿತ ಪಕ್ಷಪಾತಿ ಅಥವಾ ಸರಕಾರದ ಮಹತ್ವದ ನೀತಿಗಳು, ಕ್ರಮಗಳು ಮತ್ತು ನಿರ್ದೇಶನಗಳಲ್ಲಿ ತನಗೆ ಬೇಕಾದವುಗಳನ್ನು ಮಾತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸುವ ವ್ಯಕ್ತಿ ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ’’ ಎಂದು ಕೊಲಿಜಿಯಂ ಅಭಿಪ್ರಾಯಪಟ್ಟಿತು.
ಅದೂ ಅಲ್ಲದೆ, ಸುಂದರೇಶನ್ ಯಾವುದಾದರೂ ರಾಜಕೀಯ ಪಕ್ಷದೊಂದಿಗೆ ಏನಾದರೂ ನಂಟು ಹೊಂದಿರಬಹುದು ಎಂಬ ಆರೋಪಗಳನ್ನೂ ಕೊಲಿಜಿಯಂ ತಿರಸ್ಕರಿಸಿತು.
ಸಂವಿಧಾನದ 19ನೇ ವಿಧಿ ಖಾತರಿಪಡಿಸಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಕೆ.ಎಮ್. ಜೋಸೆಫ್ ಅವರನ್ನೊಳಗೊಂಡ ಕೊಲಿಜಿಯಂ ಹೇಳಿತು.