ಫೆಲೆಸ್ತೀನ್ ಪರ ಪ್ರತಿಭಟನೆಗಳನ್ನು ತಡೆಯಲು ಶ್ರೀನಗರದ ಜಾಮಿಯಾ ಮಸೀದಿಗೆ ಅಧಿಕಾರಿಗಳಿಂದ ಬೀಗಮುದ್ರೆ

Update: 2023-10-13 16:37 GMT

Photo: Mohammad Syeed Shawl / thewire

ಶ್ರೀನಗರ: ಕಾಶ್ಮೀರದ ಅತ್ಯಂತ ದೊಡ್ಡ ಮಸೀದಿಯಾಗಿರುವ ಶ್ರೀನಗರದಲ್ಲಿಯ ಅಂಜುಮಾನ ಔಕಾಫ್ ಜಾಮಿಯಾ ಮಸೀದಿಗೆ ಶುಕ್ರವಾರ ಬೀಗಮುದ್ರೆಯನ್ನು ಹಾಕಿರುವ ಅಧಿಕಾರಿಗಳು ಹಿರಿಯ ಹುರಿಯತ್ ನಾಯಕ ಹಾಗೂ ಆಲ್ ಪಾರ್ಟೀಸ್ ಹುರಿಯತ್ ಕಾನ್ಫರೆನ್ಸ್ ನ ಮಿವೈಝ್ ಉಮರ್ ಫಾರೂಕ್ ಅವರನ್ನು ಮತ್ತೆ ಗೃಹಬಂಧನದಲ್ಲಿರಿಸಿದ್ದಾರೆ ಎಂದು ವರದಿಯಾಗಿದೆ. ಫಾರೂಕ್ ಅವರನ್ನು ನಾಲ್ಕು ವರ್ಷಗಳ ಗೃಹಬಂಧನದ ಬಳಿಕ ಕಳೆದ ವಾರವಷ್ಟೇ ಬಿಡುಗಡೆಗೊಳಿಸಲಾಗಿತ್ತು.

ವರದಿಗಳಂತೆ, ನಮಾಝ್ ಸಲ್ಲಿಸಲು ಸೇರುವ ಜನರು ಗಾಝಾದಲ್ಲಿ ಇಸ್ರೇಲ್ ಕ್ರಮಗಳನ್ನು ವಿರೋಧಿಸಿ ಮತ್ತು ಫೆಲೆಸ್ತೀನ್ ಅನ್ನು ಬೆಂಬಲಿಸಿ ಪ್ರತಿಭಟನೆಗಳನ್ನು ನಡೆಸಬಹುದು ಎಂಬ ಆತಂಕದಿಂದಾಗಿ ನಗರದ ನೋವಟ್ಟಾ ಪ್ರದೇಶದಲ್ಲಿಯ ಐತಿಹಾಸಿಕ ಮಸೀದಿಗೆ ಬೀಗಮುದ್ರೆ ಹಾಕುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಶ್ರೀನಗರದ ಹೃದಯಭಾಗದಲ್ಲಿರುವ ನೋವಟ್ಟಾ ಭಾರತ ವಿರೋಧಿ ಭಾವನೆಗಳ ಕೇಂದ್ರಬಿಂದುವಾಗಿ ಬಳಕೆಯಾಗುತ್ತಿತ್ತು. ಕೇಂದ್ರ ಸರಕಾರವು 370ನೇ ವಿಧಿಯನ್ನು ರದ್ದುಗೊಳಿಸಿ ಕಾಶ್ಮೀರದಲ್ಲಿ ಪ್ರತಿಭಟನೆಗಳನ್ನು ನಿಷೇಧಿಸುವ ಮುನ್ನ ಅಂಜುಮಾನ್ ಔಕಾಫ್ ಜಾಮಿಯಾ ಮಸೀದಿಯಿಂದ ಫೆಲೆಸ್ತೀನ್ ಪರ ಮತ್ತು ಇಸ್ರೇಲ್ ವಿರೋಧಿ ಪ್ರತಿಭಟನೆಗಳು ಆಗಾಗ್ಗೆ ವರದಿಯಾಗಿದ್ದವು.

ಪೊಲೀಸ್ ಅಧಿಕಾರಿಗಳ ತಂಡವು ಶುಕ್ರವಾರದ ಸಾಮೂಹಿಕ ಪ್ರಾರ್ಥನೆಗೆ ಮುನ್ನ ಮಸೀದಿಯ ಪ್ರವೇಶದ್ವಾರಗಳನ್ನು ಮುಚ್ಚಿದ್ದರು ಮತ್ತು ಪ್ರಾರ್ಥನೆ ಸಲ್ಲಿಸಲು ಬಂದವರನ್ನು ವಾಪಸ್ ಕಳುಹಿಸಿದರು ಎಂದು ಆಡಳಿತ ಸಮಿತಿಯ ಸದಸ್ಯರೋರ್ವರು ತಿಳಿಸಿದರು.

ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ತಡೆಯಲು ಮಸೀದಿಯಲ್ಲಿ ಮತ್ತು ಸುತ್ತುಮುತ್ತಲು ಭದ್ರತೆಯನ್ನು ಹೆಚ್ಚಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News