ಜೈಲುಗಳಲ್ಲಿ ಅಸ್ವಾಭಾವಿಕ ಸಾವುಗಳಲ್ಲಿ ಬಹುತೇಕ ಆತ್ಮಹತ್ಯೆ ಪ್ರಕರಣಗಳು: ಸುಪ್ರೀಂ ಕೋರ್ಟ್ ನೇಮಿತ ಸಮಿತಿಯ ವರದಿಯಲ್ಲಿ ಉಲ್ಲೇಖ
ದೇಶದ ಕಾರಾಗೃಹಗಳಲ್ಲಿ 2017 ಹಾಗೂ 2021ರ ನಡುವೆ ವರದಿಯಾದ 817 ಅಸ್ವಾಭಾವಿಕ ಸಾವುಗಳಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ಸಾವಿಗೆ ಆತ್ಮಹತ್ಯೆ ಕಾರಣ ಎಂದು ಕಾರಾಗೃಹ ಸುಧಾರಣೆಗಳ ಸುಪ್ರೀಂ ಕೋರ್ಟ್ ಸಮಿತಿಯು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ತನ್ನ ವರದಿಯಲ್ಲಿ ತಿಳಿಸಿದೆ ಹಾಗೂ ಆತ್ಮಹತ್ಯೆಗೈಯ್ಯಲು ಆಸ್ಪದವಿಲ್ಲದ ಬ್ಯಾರಾಕ್‌ಗಳನ್ನು ಕಾರಾಗೃಹಗಳಲ್ಲಿ ನಿರ್ಮಿಸುವ ಅಗತ್ಯತೆಯನ್ನು ಒತ್ತಿ ಹೇಳಿದೆ.
ಹೊಸದಿಲ್ಲಿ: ದೇಶದ ಕಾರಾಗೃಹಗಳಲ್ಲಿ 2017 ಹಾಗೂ 2021ರ ನಡುವೆ ವರದಿಯಾದ 817 ಅಸ್ವಾಭಾವಿಕ ಸಾವುಗಳಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ಸಾವಿಗೆ ಆತ್ಮಹತ್ಯೆ ಕಾರಣ ಎಂದು ಕಾರಾಗೃಹ ಸುಧಾರಣೆಗಳ ಸುಪ್ರೀಂ ಕೋರ್ಟ್ ಸಮಿತಿಯು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ತನ್ನ ವರದಿಯಲ್ಲಿ ತಿಳಿಸಿದೆ ಹಾಗೂ ಆತ್ಮಹತ್ಯೆಗೈಯ್ಯಲು ಆಸ್ಪದವಿಲ್ಲದ ಬ್ಯಾರಾಕ್‌ಗಳನ್ನು ಕಾರಾಗೃಹಗಳಲ್ಲಿ ನಿರ್ಮಿಸುವ ಅಗತ್ಯತೆಯನ್ನು ಒತ್ತಿ ಹೇಳಿದೆ.
ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಅಮಿತಾವ ರಾಯ್ ನೇತೃತ್ವದ ಈ ಕೋರ್ಟ್ ನೇಮಿತ ಸಮಿತಿಯ ವರದಿಯ ಪ್ರಕಾರ ಕಾರಾಗೃಹಗಳಲ್ಲಿ ನಡೆದ 817 ಅಸಹಜ ಸಾವುಗಳಲ್ಲಿ 660 ಆತ್ಮಹತ್ಯೆಗಳಾಗಿವೆ ಹಾಗೂ ಮೇಲೆ ತಿಳಿಸಿದ ಅವಧಿಯಲ್ಲಿ ಗರಿಷ್ಠ ಆತ್ಮಹತ್ಯೆಗಳು (101) ಉತ್ತರ ಪ್ರದೇಶದ ಕಾರಾಗೃಹಗಳಿಂದ ವರದಿಯಾಗಿದೆ ಎಂದು ವರದಿ ಹೇಳಿದೆ.
ಈಗಿನ ಕಾರಾಗೃಹಗಳಲ್ಲಿ ನೇಣು ಬಿಗಿಯಲು ಆಸ್ಪದವಿರುವ ಸ್ಥಳಗಳನ್ನು ಗುರುತಿಸಿ ಅಂತಹ ಸ್ಥಳಗಳಿರದಂತೆ ಬ್ಯಾರಾಕ್‌ಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ವರದಿ ಹೇಳಿದೆ.
ಡಿಸೆಂಬರ್ 27, 2022 ಎಂದು ನಮೂದಿತವಾಗಿರುವ ಅಂತಿಮ ವರದಿಯಲ್ಲಿ ಒಂಬತ್ತು ಅಧ್ಯಾಯಗಳಿದ್ದು ಅವುಗಳಲ್ಲಿ ಕಾರಾಗೃಹಗಳಲ್ಲಿ ಅಸಹಜ ಸಾವುಗಳು, ಮರಣದಂಡನೆ ವಿಧಿಸಲ್ಪಟ್ಟ ಅಪರಾಧಿಗಳು ಹಾಗೂ ಭಾರತೀಯ ಜೈಲುಗಳಲ್ಲಿ ಹಿಂಸೆ ಎಂಬ ಕುರಿತಾದ ವಿಚಾರಗಳಿವೆ.
ಪ್ರಿಸನರ್ ಸ್ಟೆಟಿಸ್ಟಿಕ್ಸ್ ಡೇಟಾ ಪರಿಗಣಿಸಿರುವ ವರದಿಯು 2019ರಿಂದ ಕಸ್ಟಡಿ ಸಾವು ಪ್ರಕರಣಗಳಲ್ಲಿ ಏರಿಕೆಯಾಗಿದೆ ಮತ್ತು 2021ರಲ್ಲಿ ಗರಿಷ್ಠ ಸಾವು ಪ್ರಕರಣಗಳು (ಶೇ80 ಆತ್ಮಹತ್ಯೆ) ವರದಿಯಾಗಿವೆ ಎಂದು ಹೇಳಿದೆ.
2017-2021 ಅವಧಿಯಲ್ಲಿ ವೃದ್ಧಾಪ್ಯದಿಂದ 463 ಕೈದಿಗಳು ಹಾಗೂ ಅನಾರೋಗ್ಯದಿಂದ 7,736 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ. ಈ ಅವಧಿಯಲ್ಲಿ ಕಾರಾಗೃಹಗಳಲ್ಲಿ ಒಟ್ಟು 41 ಕೊಲೆಗಳು, 46 ಆಕಸ್ಮಿಕ ಸಾವುಗಳು ಸಂಭವಿಸಿವೆ ಎಂದು ತಿಳಿಸಲಾಗಿದೆ.
ಜೈಲುಗಳಲ್ಲಿ ಆತ್ಮಹತ್ಯೆ ಪ್ರಕರಣಗಳನ್ನು ಪರಿಗಣಿಸಿದಾಗ ಉತ್ತರ ಪ್ರದೇಶದ(101) ನಂತರದ ಸ್ಥಾನಗಳಲ್ಲಿ ಪಂಜಾಬ್ (63), ಪಶ್ಚಿಮ ಬಂಗಾಳ (60), ದಿಲ್ಲಿ (40) ಇವೆ.
ಕೈದಿಗಳ ದೂರುಗಳನ್ನು ಪರಿಹರಿಸಲು ಸೂಕ್ತ ವ್ಯವಸ್ಥೆ ಇರಬೇಕೆಂದು ವರದಿ ಶಿಫಾರಸು ಮಾಡಿದೆ. ದೇಶದ 1382 ಕಾರಾಗೃಹಗಳ ಸ್ಥಿತಿಯನ್ನು ಸುಪ್ರೀಂ ಕೋರ್ಟಿಗೆ ವಿವರಿಸಲಾಗಿದ್ದು ಈ ವಿಚಾರದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 26ಕ್ಕೆ ನಡೆಸಲಿದೆ.