ಮಕ್ಕಳಿಗೆ ಸಮರ್ಪಕ ಶಿಕ್ಷಣಕ್ಕೆ ಮದರಸಾಗಳು ಸೂಕ್ತವಲ್ಲ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ NCPCR

Update: 2024-09-12 11:54 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಮದರಸಾಗಳು ಮಕ್ಕಳಿಗೆ ಸಮರ್ಪಕ ಶಿಕ್ಷಣಕ್ಕೆ ಸೂಕ್ತ ಸ್ಥಳವಾಗಿಲ್ಲ, ಮದರಸಾಗಳಲ್ಲಿ ನೀಡುವ ಶಿಕ್ಷಣವು ಸಮಗ್ರವಾಗಿಲ್ಲ ಮತ್ತು ಶಿಕ್ಷಣ ಹಕ್ಕು ಕಾಯಿದೆಯ ನಿಬಂಧನೆಗಳಿಗೆ ವಿರುದ್ಧವಾಗಿ ಮದ್ರಸಾಗಳು ಕಾರ್ಯಚರಿಸುತ್ತಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು(NCPCR) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಮದರಸಾಗಳಲ್ಲಿ ಮಕ್ಕಳು ಮಧ್ಯಾಹ್ನದ ಊಟ, ಸಮವಸ್ತ್ರ ಸೇರಿದಂತೆ ಪ್ರಾಥಮಿಕ ಶಿಕ್ಷಣದ ಮೂಲಭೂತ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ಮಕ್ಕಳ ಹಕ್ಕುಗಳ ಸಂಸ್ಥೆ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

ಮದರಸಾಗಳ ಪಠ್ಯಕ್ರಮದಲ್ಲಿ ಕೆಲ ಎನ್ಸಿಆರ್ ಟಿ ಪಠ್ಯಗಳ ಅಳವಡಿಕೆ ಕೇವಲ ಶಿಕ್ಷಣ ನೀಡುವ ನೆಪ ಮಾತ್ರದಿಂದ ಕೂಡಿದೆ. ಮದರಸಾಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿಲ್ಲ ಎಂದು ಹೇಳಿದೆ. ಮದ್ರಸಾಗಳು ಸಮರ್ಪಕ ಶಿಕ್ಷಣ ಪಡೆಯಲು ಸೂಕ್ತವಲ್ಲದ ಸ್ಥಳವಾಗಿದೆ. ಇದಲ್ಲದೆ ಆರ್ ಟಿಇ ಕಾಯಿದೆಯ ಸೆಕ್ಷನ್ 19, 21 ,22, 23, 24, 25 ಮತ್ತು 29ನ್ನು ಪಾಲಿಸಲಾಗುತ್ತಿಲ್ಲ ಎಂದು ಹೇಳಿದೆ.

ಮದರಸಾಗಳಲ್ಲಿ ಸರಿಯಾದ ಪಠ್ಯಕ್ರಮ ಇಲ್ಲ, ಶಿಕ್ಷಕರ ಅರ್ಹತೆ, ಧನಸಹಾಯದ ವಿಷಯಗಳಲ್ಲಿ ಪಾರದರ್ಶಕತೆಯ ಕೊರತೆಯಿದೆ. ಮಕ್ಕಳಿಗೆ ಸಮಗ್ರ ಕಲಿಕಾ ವಾತಾವರಣ ಕಲ್ಪಿಸುವಲ್ಲಿ ಮದ್ರಸಾಗಳು ವಿಫಲವಾಗಿವೆ ಎಂದು ಕೋರ್ಟ್ ಗೆ ತಿಳಿಸಲಾಗಿದೆ.

ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಪಠ್ಯೇತರ ಚಟುವಟಿಕೆಗಳನ್ನು ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಹೇಗೆ ಆಯೋಜಿಸಬೇಕು ಎಂಬುವುದು ಬಹುತೇಕ ಮದರಸಾಗಳಿಗೆ ತಿಳಿದಿಲ್ಲ. ಸಮರ್ಥವಲ್ಲದ ಪಠ್ಯಕ್ರಮವು ಮಗುವಿನ ಶೈಕ್ಷಣಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ. ಮುಸ್ಲಿಮೇತರ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮದರಸಾಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂಬುವುದನ್ನು ಕೂಡ ಸುಪ್ರೀಂಕೋರ್ಟ್ಗೆ ನೀಡಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News