'ಬುಲ್ಡೋಜರ್ ನ್ಯಾಯ' ಧ್ವಂಸ ಕಾರ್ಯಾಚರಣೆ ವಿರುದ್ಧ ಸುಪ್ರೀಂ ಮಾರ್ಗಸೂಚಿಯಲ್ಲೇನಿದೆ?
ಹೊಸದಿಲ್ಲಿ: ಜನಸಾಮಾನ್ಯರ ಆಸ್ತಿಗಳನ್ನು ಧ್ವಂಸಗೊಳಿಸುವ ಬೆದರಿಕೆ ಹಾಕುವ ಮೂಲಕ ನಾಗರಿಕರ ಧ್ವನಿಯನ್ನು ಹತ್ತಿಕ್ಕಲಾಗದು ; ಕಾನೂನುಗಳ ಆಡಳಿತದ ಸಮಾಜ ವ್ಯವಸ್ಥೆಯಲ್ಲಿ ಬುಲ್ಡೋಜರ್ ನ್ಯಾಯಕ್ಕೆ ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡುವ ಮೂಲಕ ಮೊಟ್ಟಮೊದಲ ಬಾರಿಗೆ 'ಬುಲ್ಡೋಜರ್ ನ್ಯಾಯ' ಧ್ವಂಸ ಕಾರ್ಯಾಚರಣೆ ವಿರುದ್ಧ ಮಾರ್ಗಸೂಚಿಯನ್ನು ನೀಡಿದೆ.
"ಯಾವುದೇ ನಾಗರಿಕ ನ್ಯಾಯವ್ಯವಸ್ಥೆಗೆ ಬುಲ್ಡೋಜರ್ ಮೂಲಕ ನ್ಯಾಯ ನೀಡುವುದು ಅಪರಿಚಿತ. ಈ ಉನ್ನತ ಹಸ್ತಕ್ಷೇಪದ ಮತ್ತು ಕಾನೂನುಬಾಹಿರ ನಡವಳಿಕೆಗೆ ಸರ್ಕಾರದ ಯಾವುದೇ ವಿಭಾಗ ಅಥವಾ ಅಧಿಕಾರಿಗೆ ಅವಕಾಶ ನೀಡಿದಲ್ಲಿ, ಆಯ್ದ ನಾಗರಿಕರ ಅಸ್ತಿಗಳನ್ನು ಧ್ವಂಸಗೊಳಿಸುವುದನ್ನು ಪ್ರತೀಕಾರದ ಬಾಹ್ಯ ಕ್ರಮವಾಗಿ ಕೈಗೆತ್ತಿಕೊಳ್ಳುವ ಅಪಾಯವಿದೆ" ಎಂದು ಶನಿವಾರ ಅಪ್‍ಲೋಡ್ ಮಾಡಲಾದ ತೀರ್ಪಿನಲ್ಲಿ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಹೇಳಿದೆ.
ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಡ್ಡಾಯ ಸುರಕ್ಷಾ ಕ್ರಮಗಳನ್ನು ಸೂಚಿಸಲಾಗಿದ್ದು, ಧ್ವಂಸ ಕಾರ್ಯಾಚರಣೆ ಪ್ರಕ್ರಿಯೆಯನ್ನು ಸೂಕ್ತ ಸಮೀಕ್ಷೆಗಳು, ಲಿಖಿತ ನೋಟಿಸ್‍ಗಳು ಮತ್ತು ಆಕ್ಷೇಪಣೆಗಳನ್ನು ಪರಿಗಣಿಸಿದ ಬಳಿಕವೇ ಕೈಗೊಳ್ಳಬೇಕು. ಈ ಮಾರ್ಗಸೂಚಿಯನ್ನು ಉಲ್ಲಂಘಿಸುವ ಅಧಿಕಾರಿಗಳು, ಶಿಸ್ತುಕ್ರಮ ಹಾಗು ಅಪರಾಧ ಆರೋಪಗಳನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಜೆಬಿ ಪರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಇದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
"ರಾಜ್ಯ ಸರ್ಕಾರಗಳ ಇಂಥ ಉನ್ನತ ಹಸ್ತಕ್ಷೇಪದ ಹಾಗೂ ಏಕಪಕ್ಷೀಯ ಕ್ರಮವನ್ನು ಅನುಮೋದಿಸುವಂತಿಲ್ಲ... ಇದನ್ನು ಅನುಮತಿಸಿದರೆ, ಸಂವಿಧಾನದ 300ಎ ಅಡಿಯಲ್ಲಿ ನೀಡಿರುವ ಆಸ್ತಿ ಹಕ್ಕನ್ನು ಮಾನ್ಯಮಾಡುವ ಸಂವಿಧಾನಾತ್ಮಕ ಕ್ರಮವು ಮೃತ ಪತ್ರ ಎನಿಸಲಿದೆ" ಎಂದು ಸ್ಪಷ್ಟಪಡಿಸಲಾಗಿದೆ.
ಅಭಿವೃದ್ಧಿ ಯೋಜನೆಗಳಿಗೆ ನಡೆಸುವ ತೆರವು ಕಾರ್ಯಾಚರಣೆ ಸೆರಿದಂತೆ ಯಾವುದೇ ಆಸ್ತಿಗಳ ಧ್ವಂಸಕ್ಕೆ ಮುನ್ನ ಆರು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದನ್ನು ಕೋರ್ಟ್ ಕಡ್ಡಾಯಪಡಿಸಿದೆ. ಹಾಲಿ ಭೂದಾಖಲೆಗಳು ಹಾಗೂ ನಕ್ಷೆಯ ಪರಿಶೀಲನೆ, ಒತ್ತುವರಿ ಪತ್ತೆಗೆ ಸೂಕ್ತ ಸಮೀಕ್ಷೆ, ಅತಿಕ್ರಮಣ ಅರೋಪ ಎದುರಿಸುತ್ತಿರುವವರಿಗೆ ನೋಟಿಸ್ ನೀಡುವುದು, ಆದೇಶ ಕೋರುವ ವೇಳೆ ಆಕ್ಷೇಪಣೆಗಳನ್ನು ಪರಿಗಣಿಸುವುದು, ಸ್ವಯಂ ತೆರವಿಗೆ ಸಾಕಷ್ಟು ಕಾಲಾವಕಾಶ ನೀಡುವುದು ಮತ್ತು ಹೆಚ್ಚುವರಿ ಭೂಮಿಯನ್ನು ಅಗತ್ಯಬಿದ್ದಲ್ಲಿ ಕಾನೂನುಬದ್ಧವಾಗಿ ಸ್ವಾಧೀನಪಡಿಸಿಕೊಳ್ಳುವುದು ಕಡ್ಡಾಯ ಎಂದು ಹೇಳಿದೆ.