ಕೋಲ್ಕತ್ತಾ ಅತ್ಯಾಚಾರ- ಹತ್ಯೆ ಪ್ರಕರಣ: ಸಂತ್ರಸ್ತೆಯ ಹೆಸರು ತೆಗೆದು ಹಾಕುವಂತೆ ವಿಕಿಪೀಡಿಯಾಗೆ ಸೂಚಿಸಿದ ಸುಪ್ರೀಂ ಕೋರ್ಟ್

Update: 2024-09-17 08:09 GMT

ಹೊಸದಿಲ್ಲಿ: ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದ್ದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಹತ್ಯೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಹೆಸರನ್ನು ತೆಗೆದು ಹಾಕುವಂತೆ ಮಂಗಳವಾರ ಸುಪ್ರೀಂ ಕೋರ್ಟ್ ವಿಕಿಪೀಡಿಯಗೆ ಸೂಚಿಸಿದೆ.

ಈ ಪ್ರಕರಣದ ಕುರಿತು ತನಿಖೆ ಪ್ರಗತಿಯಲ್ಲಿದ್ದರೂ, ವಿಕಿಪೀಡಿಯ ಸಂತ್ರಸ್ತೆಯ ಹೆಸರನ್ನು ನಮೂದಿಸಿ, ಸಂತ್ರಸ್ತೆಯನ್ನು ಕಾಲ್ಪನಿಕವಾಗಿ ಚಿತ್ರಿಸಲಾಗಿದೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

ಸಿಬಿಐ ಅನ್ನು ಪ್ರತಿನಿಧಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹಲವಾರು ಸಾಮಾಜಿಕ ಮಾಧ್ಯಮಗಳಲ್ಲಿ ಸಂತ್ರಸ್ತೆಯ ನಿರ್ದಿಷ್ಟ ಕೇಶ ವಿನ್ಯಾಸದ ಚಿತ್ರಗಳು ಹರಿದಾಡುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ, ಸಿಬಿಐ ತನಿಖೆಯು ಪ್ರಗತಿಯಲ್ಲಿರುವ ಈ ಹಂತದಲ್ಲಿ ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸುವುದು ಸೂಕ್ತವಾಗಲಾರದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿತು.

“ಈ ಹಂತದಲ್ಲಿ ಸಿಬಿಐಗೆ ದೊರೆತಿರುವ ಸುಳಿವುಗಳನ್ನು ಬಹಿರಂಗಗೊಳಿಸುವುದರಿಂದ ತನಿಖೆ ದಾರಿ ತಪ್ಪುವ ಸಾಧ್ಯತೆ ಇದೆ. ಹೀಗಾಗಿ ಇದು ನ್ಯಾಯೋಚಿತವಲ್ಲ” ಎಂದೂ ಸುಪ್ರೀಂ ಕೋರ್ಟ್ ಹೇಳಿತು.

ಈ ನಡುವೆ, ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದ್ದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹೊಸದಾಗಿ ವಸ್ತು ಸ್ಥಿತಿ ವರದಿಯನ್ನು ಸಲ್ಲಿಸಿತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News