ಅಂತರ ರಾಜ್ಯ ಜೀತದಾಳಗಳ ಸಾಗಾಟ ಸಮಸ್ಯೆ ಪರಿಹರಿಸಲು ಪ್ರಸ್ತಾವ ರೂಪಿಸಿ : ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ
ಹೊಸದಿಲ್ಲಿ : ಅಪ್ರಾಪ್ತರು ಸೇರಿದಂತೆ ಜೀತದಾಳುಗಳ ಅಂತರ ರಾಜ್ಯ ಸಾಗಾಟದ ಸಮಸ್ಯೆ ಪರಿಹರಿಸಲು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಭೆ ನಡೆಸುವಂತೆ ಹಾಗೂ ಪ್ರಸ್ತಾವವೊಂದನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದೆ.
ಉತ್ತರಪ್ರದೇಶದಲ್ಲಿ 5,264 ಜೀತದಾಳುಗಳನ್ನು ಬಿಡುಗಡೆ ಮಾಡಲಾಗಿದೆ. ಅವರಲ್ಲಿ ಕೇವಲ 1,101 ಜೀತದಾಳುಗಳು ಮಾತ್ರ ತಕ್ಷಣ ಹಣಕಾಸು ನೆರವು ಸ್ವೀಕರಿಸಿದ್ದಾರೆ ಎಂಬುದನ್ನು ತೋರಿಸುವ ಅಂಕಿ-ಅಂಶವನ್ನು ಮುಂದಿರಿಸಿದ ಬಳಿಕ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಹಾಗೂ ಕೆ.ವಿ. ವಿಶ್ವನಾಥನ್ ಅವರನ್ನು ಒಳಗೊಂಡ ಪೀಠ ಇದು ‘ಆತಂಕಕಾರಿ’ ಎಂದು ಹೇಳಿತು.
ಕೆಲವು ಪ್ರಕರಣಗಳಲ್ಲಿ ಅಪ್ರಾಪ್ತರನ್ನು ಅವರ ಊರಿನಿಂದ ಕರೆದು ಕೊಂಡು ಹೋಗುವುದರಿಂದ ಹಾಗೂ ಸಮೀಪದ ರಾಜ್ಯಗಳಲ್ಲಿ ಜೀತದಾಳುಗಳನ್ನಾಗಿ ಮಾಡುವುದರಿಂದ ರಕ್ಷಿಸಲಾದ ಮಕ್ಕಳಿಗೆ ಕೂಡಲೇ ಹಣಕಾಸು ನೆರವು ವಿತರಣೆಯಲ್ಲಿ ಸಮಸ್ಯೆ ಉಂಟಾಗಿರುವುದನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತೆಗೆದುಕೊಂಡಿತು.
ಮಕ್ಕಳ ಅಂತರ ರಾಜ್ಯ ಸಾಗಾಟ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ನಾವು ಈ ಸಮಸ್ಯೆಯನ್ನು ಕೇಂದ್ರ ಸರಕಾರ ಹಾಗೂ ಎಲ್ಲಾ ರಾಜ್ಯಗಳು ಏಕೀಕೃತ ರೀತಿಯಲ್ಲಿ ಪರಿಹರಿಸುವ ಅಗತ್ಯ ಇದೆ ಎಂದು ಕಂಡು ಕೊಂಡಿದ್ದೇವೆ ಎಂದು ಪೀಠ ಹೇಳಿದೆ.
ಜೀತಾದಾಳುಗಳಾಗಿ ಅಕ್ರಮ ಸಾಗಾಟಕ್ಕೆ ಒಳಗಾಗುವ ಜನರ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.
ರಕ್ಷಿಸಲಾದ ಬಾಲ ಕಾರ್ಮಿಕರಿಗೆ ಕೂಡಲೇ ಹಣಕಾಸು ನೆರವು ಒದಗಿಸುವ ಯೋಜನೆಗೆ ನೆರವು ನೀಡಲು ಸರಳೀಕೃತ ಪ್ರಕ್ರಿಯೆಯನ್ನು ಒಳಗೊಂಡ ಪ್ರಸ್ತಾವವನ್ನು ಪೀಠ ಬಯಸಿತು.
ಈ ವಿಷಯದ ಪ್ರಾಮಖ್ಯತೆಯನ್ನು ಗಣನೆಗೆ ತೆಗೆದುಕೊಂಡು ನಾವು ಅಟಾರ್ನಿ ಜನರಲ್ ಅವರು ನೆರವು ಪಡೆದುಕೊಳ್ಳುವುದು ಸೂಕ್ತ ಎಂದು ಕಂಡು ಕೊಂಡಿದ್ದೇವೆ. ಆದುದರಿಂದ ನಾವು ಈ ವಿಷಯದಲ್ಲಿ ನಮಗೆ ನೆರವು ನೀಡುವಂತೆ ಅಟಾರ್ನಿ ಜನರಲ್ ಅವರಲ್ಲಿ ಮನವಿ ಮಾಡುತ್ತೇವೆ ಎಂದು ಪೀಠ ಹೇಳಿತು.
ಪ್ರಕ್ರಿಯೆಯನ್ನು ಅಂತಿಮಗೊಳಿಸುವಾಗ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿತು.