ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ, ಪತ್ನಿ ವಿರುದ್ಧದ ಲುಕ್ ಔಟ್ ನೋಟಿಸ್ ಹಿಂಪಡೆಯುವಂತೆ ಸುಪ್ರೀಂ ನಿರ್ದೇಶ
ಹೊಸದಿಲ್ಲಿ: ಕಲ್ಲಿದ್ದಲು ಹಗರಣದಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಹಾಗೂ ಅವರ ಪತ್ನಿ ರುಚಿರಾ ಬ್ಯಾನರ್ಜಿ ವಿರುದ್ಧ ಜಾರಿಗೊಳಿಸಲಾದ ಲುಕ್ ಔಟ್ ನೋಟಿಸ್ (ಎಲ್ಒಸಿ) ಗಳನ್ನು ಹಿಂಪಡೆಯುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದೆ.
ಪಶ್ಚಿಮ ಬಂಗಾಳದ ಕುನುಸ್ಟೋರಿಯಾ ಹಾಗೂ ಕಜೋರಾ ಪ್ರದೇಶಗಳಲ್ಲಿ ಈಸ್ಟನ್ ಕೋಲ್ಫೀಲ್ಡ್ ಲಿಮಿಟೆಡ್ನ ಗಣಿಯಿಂದ ಕಲ್ಲಿದ್ದಲು ಕಳವು ಹಾಗೂ ಅಕ್ರಮ ಗಣಿಗಾರಿಕೆ ಆರೋಪದ ಪ್ರಕರಣದಲ್ಲಿ ಅಭಿಷೇಕ್ ಬ್ಯಾನರ್ಜಿ ಹಾಗೂ ಅವರ ಪತ್ನಿ ರುಚಿರಾ ಬ್ಯಾನರ್ಜಿ ಅವರನ್ನು ಆರೋಪಿಗಳು ಎಂದು ಹೆಸರಿಸಲಾಗಿದೆ. ಕಳೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ದಂಪತಿ ವಿರುದ್ಧ ಲಕೌಟ್ ನೋಟಿಸ್ ಜಾರಿಗೊಳಿಸಿದ ಜಾರಿ ನಿರ್ದೇಶನಾಲಯವನ್ನು ತರಾಟೆಗೆ ತೆಗೆದುಕೊಂಡಿತ್ತು.
ನೋಟಿಸು ಜಾರಿಗೊಳಿಸಿದ್ದ ಹಿನ್ನೆಲೆಯಲ್ಲಿ ಯುಎಇಗೆ ತೆರಳಿದ್ದ ರುಚಿರಾ ಅವರನ್ನು ಜೂನ್ 5ರಂದು ವಿಮಾನ ಏರಲು ಅವಕಾಶ ಜಾರಿ ನಿರ್ದೇಶನಾಲಯ ಅವಕಾಶ ನೀಡಿರಲಿಲ್ಲ. ವಿಚಾರಣೆಗೆ ದಿಲ್ಲಿಗೆ ಬರುವಂತೆ ನಿರ್ದೇಶಿಸಿ ವಿವಿಧ ರಾಜಕೀಯ ನಾಯಕರಿಗೆ ಕೇಂದ್ರ ಜಾರಿ ನಿರ್ದೇಶನಾಲಯ ಜಾರಿಗೊಳಿಸಿದ್ದ ಸಮನ್ಸ್ ಕುರಿತ ಅರ್ಜಿಗಳ ಗುಚ್ಛವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ಸಂದರ್ಭ ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ದಂಪತಿ ವಿರುದ್ಧ ಜಾರಿಗೊಳಿಸಲಾಗಿದ್ದ ಲುಕ್ ಔಟ್ ನೋಟಿಸ್ ಅನ್ನು ಜಾರಿಗೊಳಿಸಲಾಗಿದೆ ಹಾಗೂ ಅವರಿಗೆ ಹಲವು ಬಾರಿ ವಿದೇಶಗಳಿಗೆ ತೆರಳಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು. ಆದರೆ, ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಹಾಗೂ ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಪೀಠ ಲುಕ್ ಔಟ್ ನೋಟಸ್ ಅನ್ನು ಹಿಂಪಡೆಯುವಂತೆ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶಿಸಿತು.
''ಅವರು ಹೋಗುವಾಗ ನಿಮ್ಮ ಅನುಮತಿ ಕೇಳುತ್ತಾರೆ. ಅವರು ನಿಮಗೆ ಮಾಹಿತಿ ನೀಡುತ್ತಾರೆ'' ಎಂದು ನ್ಯಾಯಾಲಯ ಹೇಳಿತು. ರಾಜು ಅವರು ಷರತ್ತಿಗೆ ಒಪ್ಪಿಕೊಂಡರು ಹಾಗೂ ಲುಕ್ ಔಟ್ ನೋಟಿಸ್ ಅನ್ನು ಹಿಂಪಡೆಯಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದರು.