"ಸಾಮಾನ್ಯ ನಾಗರಿಕ ನಿಮ್ಮಂತೆ ಪ್ರತಿಭಟನೆ ನಡೆಸಿದರೆ...?": ರಾಜಕಾರಣಿಗಳ ನೇತೃತ್ವದಲ್ಲಿ ಪ್ರತಿಭಟನೆಗಳ ಕಾನೂನುಬದ್ಧತೆ ಪ್ರಶ್ನಿಸಿದ ಸುಪ್ರೀಂ ಕೋರ್ಟ್

Update: 2024-02-19 11:51 GMT

ಹೊಸದಿಲ್ಲಿ: ರಾಜಕಾರಣಿಗಳ ನೇತೃತ್ವದಲ್ಲಿ ಪ್ರತಿಭಟನೆಗಳ ಕಾನೂನುಬದ್ಧತೆಯ ಕುರಿತು ಸೋಮವಾರ ಪ್ರಶ್ನೆಗಳನ್ನೆತ್ತಿರುವ ಸರ್ವೋಚ್ಚ ನ್ಯಾಯಾಲಯವು, ಇತ್ತೀಚಿಗೆ ದಿಲ್ಲಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ನಾಯಕರು ನಡೆಸಿದ್ದ ಪ್ರತಿಭಟನೆಯನ್ನು ವಿಶೇಷವಾಗಿ ಬೆಟ್ಟು ಮಾಡಿದೆ. ಇದೇ ಸಂದರ್ಭದಲ್ಲಿ, 2022ರಲ್ಲಿ ಈ ನಾಯಕರು ನಡೆಸಿದ್ದ ಪ್ರತಿಭಟನಾ ಜಾಥಾಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆಯನ್ನು ನೀಡಿದೆ.

ಪ್ರಕರಣದಲ್ಲಿ ತಮ್ಮ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಈ ನಾಯಕರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಕರ್ನಾಟಕ ಸರಕಾರ ಮತ್ತು ಪ್ರಕರಣದಲ್ಲಿ ದೂರುದಾರರಿಗೆ ನೋಟಿಸ್ ಹೊರಡಿಸಿದ ನ್ಯಾಯಮೂರ್ತಿಗಳಾದ ಹೃಷಿಕೇಶ ರಾಯ್ ಮತ್ತು ಪಿ.ಕೆ.ಮಿಶ್ರಾ ಅವರ ಪೀಠವು, ತನ್ಮೂಲಕ ಪ್ರತಿಭಟನೆಯ ಸುತ್ತಲಿನ ಕಾನೂನು ಅಂಶಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವ ಸುಳಿವು ನೀಡಿತು.

ಸಾಮಾನ್ಯ ನಾಗರಿಕನೋರ್ವ ಇದೇ ರೀತಿಯ ಪ್ರತಿಭಟನೆಯನ್ನು ನಡೆಸಿದರೆ ಏನು? ಆಗಲೂ ಕ್ರಿಮಿನಲ್ ಪ್ರಕರಣವನ್ನು ವಜಾಗೊಳಿಸಬಹುದೇ ಎಂದು ಪ್ರಶ್ನಿಸಿದ ನ್ಯಾ.ಮಿಶ್ರಾ, ರಾಜಕಾರಣಿಗಳನ್ನು ಒಳಗೊಂಡಿರುವ ತೀರ್ಪುಗಳನ್ನೂ ನ್ಯಾಯಾಲಯವು ಪರಿಶೀಲಿಸುತ್ತಿದೆ ಎಂದು ಒತ್ತಿ ಹೇಳಿದರು. ಕಾನೂನು ವ್ಯವಸ್ಥೆಯ ನಿಷ್ಪಕ್ಷಪಾತದ ಬಗ್ಗೆ ಅವರು ಕಳವಳಗಳನ್ನು ವ್ಯಕ್ತಪಡಿಸಿದರು.

ಪ್ರಕರಣವು 2022ರಲ್ಲಿ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರ ವಿರುದ್ಧ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ನಾಯಕರು ನಡೆಸಿದ್ದ ಪ್ರತಿಭಟನಾ ಜಾಥಾಕ್ಕೆ ಸಂಬಂಧಿಸಿದೆ. ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆಗೆ ಕಾರಣವಾಗಿದ್ದ ಪಿಡಬ್ಲ್ಯುಡಿ ಗುತ್ತಿಗೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಈಶ್ವರಪ್ಪ ರಾಜೀನಾಮೆಗೆ ಪ್ರತಿಭಟನಾಕಾರರು ಆಗ್ರಹಿಸಿದ್ದರು.

ಕರ್ನಾಟಕ ಉಚ್ಚ ನ್ಯಾಯಾಲಯವು ಸಿದ್ದರಾಮಯ್ಯ ಮತ್ತು ಇತರ ನಾಯಕರಿಗೆ ತಲಾ 10,000 ರೂ.ಗಳ ದಂಡವನ್ನು ವಿಧಿಸಿತ್ತು. ಹೀಗಾಗಿ ತಮ್ಮ ವಿರುದ್ಧ ವಿಚಾರಣೆಗೆ ತಡೆಯಾಜ್ಞೆ ನೀಡಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪು ಈ ನಾಯಕರಿಗೆ ನಿರಾಳತೆಯನ್ನುಂಟು ಮಾಡಿದೆ. ಅಲ್ಲದೆ,ಉಚ್ಚ ನ್ಯಾಯಾಲಯವು ಮಾ.6ರಂದು ವಿಶೇಷ ನ್ಯಾಯಾಲಯದ ಎದುರು ಹಾಜರಾಗುವಂತೆ ಅವರಿಗೆ ನೀಡಿದ್ದ ನಿರ್ದೇಶನವನ್ನೂ ಈಗ ಸರ್ವೋಚ್ಚ ನ್ಯಾಯಾಲಯವು ತಡೆಹಿಡಿದಿದೆ. 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News